ಬೆಂಗಳೂರು: ನಾರಿ ಶಕ್ತಿ ವಂದನಾ ಅಧಿನಿಯಮ ಹಾಗೂ ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.
ಈ ಹಿಂದೆ ಮಸೂದೆಯನ್ನು ಸ್ವಾಗತ ಮಾಡುತ್ತೇವೆಂದು ಹೇಳಿ ಈಗ ಕಿತಾಪತಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರೀಗ ಧರ್ಮಾಧಾರಿತ ಮೀಸಲು ನೀಡಬೇಕೆಂದು ಆಗ್ರಹ ಮಾಡುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಿಗೆ ಅವಕಾಶವಿಲ್ಲ. ದೇಶದ ಎಲ್ಲ ಮಹಿಳೆಯರು ಈ ಮಸೂದೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.
ತಮಿಳುನಾಡು ಸಿಎಂ ಸ್ಟಾಲಿನ್ಗೆ ಬುದ್ಧಿ ಕಡಿಮೆ ಇದೆ,ಹಾಗೇನೆ ಕಾಂಗ್ರೆಸ್ ನಾಯಕರು ಕೂಡ ಅನ್ಯಾಯ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಿಂದೆ ಲೋಕಸಭೆ ಕ್ಷೇತ್ರ ಎಷ್ಟಿರಬೇಕೆಂದು ಕಾಂಗ್ರೆಸ್ ನಾಯಕರೇ ತೀರ್ಮಾನ ಮಾಡಿದ್ದರು. ಜನಸಂಖ್ಯೆ ಆಧಾರಿತವಾಗಿಯೇ ಕ್ಷೇತ್ರ ಮರುವಿಂಗಡಣೆ ಮಾಡಲಾಗುತ್ತಿತ್ತು. ರಾಜ್ಯದಲ್ಲಿ 28 ಲೋಕಸಭೆ ಕ್ಷೇತ್ರಗಳು 42 ಆಗುತ್ತಿವೆ. ಇಲ್ಲಿ ಕ್ಷೇತ್ರಗಳು ಕಡಿಮೆಯಾಗುವುದಿಲ್ಲ. ಕೇರಳದಲ್ಲಿ 20 ಕ್ಷೇತ್ರಗಳಿಂದ 30 ಕ್ಕೆ, ತಮಿಳುನಾಡಿನಲ್ಲಿ 39 ರಿಂದ 59 ಕ್ಕೆ ಏರಿಕೆಯಾಗಲಿದೆ. ಆದರೂ ವಿರೋಧ ಮಾಡುತ್ತಿದ್ದಾರೆ. ಇದನ್ನು ಜಾರಿ ಮಾಡಿದರೆ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಿ ಎಲ್ಲರೂ ಟೆಂಟ್ ಕಟ್ಟಿಕೊಂಡು ಹೋಗಬೇಕಾಗುತ್ತದೆ ಎಂಬ ಭಯ ವಿರೋಧ ಪಕ್ಷಗಳ ನಾಯಕರಲ್ಲಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ಅನ್ಯಾಯ ಆಗುತ್ತಿಲ್ಲ. ಯಾವುದೇ ರಾಜ್ಯಗಳಲ್ಲಿ ಸ್ಥಾನಗಳು ಕಡಿಮೆಯಾಗುತ್ತಿಲ್ಲ. ವಿರೋಧ ಪಕ್ಷಗಳ ನಾಯಕರಿಗೆ ಅಭಿವೃದ್ಧಿ ಬೇಕಿಲ್ಲ. ಕಾಂಗ್ರೆಸ್ನ ವಂಶಾಡಳಿತಕ್ಕೆ ಪೂರಕವಾಗಿ ಎಲ್ಲರೂ ಮಾತಾಡುತ್ತಿದ್ದಾರೆ ಎಂದು ಅಶೋಕ ಟೀಕಿಸಿದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಮಾಡಿಸಿದ ಕೊಲೆ ಪ್ರಕರಣದಲ್ಲಿ, ಇಬ್ಬರು ಸಾಕ್ಷಿ ಹೇಳಿದ್ದಾರೆ. ರಾಜಕಾರಣಿಗಳ ಮಾತು ಕೇಳಿಕೊಂಡು ಕೊಲೆ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದು ಇದೇ ವೇಳೆ ಆರ್.ಅಶೋಕ್ ತಿಳಿಸಿದರು.
ಸಿಬಿಐ ತನಿಖೆ ನಡೆಯದೇ ಇದ್ದಿದ್ದರೆ ಪೊಲೀಸ್ ಇಲಾಖೆ ಕೇಸನ್ನು ಮುಚ್ಚಿಹಾಕುತ್ತಿತ್ತು. ಈಗ ಎಲ್ಲವೂ ಸಾಬೀತಾಗಿದೆ, ತಪ್ಪಿತಸ್ಥರು ಯಾರೆಂದು ಗೊತ್ತಾಗಿದೆ. ವಿನಯ್ ಕುಲಕರ್ಣಿಯೇ ಕೊಲೆ ಮಾಡಿಸಿದ್ದು ಎಂದು ಕೋರ್ಟ್ ತೀರ್ಪು ನೀಡಿದೆ. ರಾಜಕೀಯ ಕ್ಷೇತ್ರದಲ್ಲಾಗುವ ಕೊಲೆಗಳಿಗೆ ಇದು ತಿಲಾಂಜಲಿ ನೀಡಲಿದೆ. ಇದು ಸ್ವಾಗತಾರ್ಹ ತೀರ್ಪು ಎಂದು ಹೇಳಿದರು.
ಸಿಎಂ ಸ್ಥಾನ ಕುರಿತು ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಎಲ್ಲರೂ ದೆಹಲಿಗೆ ಹೋಗುತ್ತಿರುವುದರಿಂದ ಸರ್ಕಾರ ಸತ್ತುಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಹಾಗೂ ಎಲ್ಲ ಸಚಿವರ ಮಕ್ಕಳು ನಮ್ಮಪ್ಪನೇ ಸಿಎಂ ಎಂದು ಹೇಳಿಕೆ ನೀಡುತ್ತಿದ್ದಾರೆ. ಪ್ರತಿ ಮನೆಯಲ್ಲೂ ಇಂದು ಕ್ಯಾಬಿನೆಟ್ ರಚನೆಯಾಗಿದೆ. ಕಾಂಗ್ರೆಸ್ ಈಗ ಒಡೆದ ಮನೆಯಾಗಿ ಜನರ ಪಾಲಿಗೆ ಸತ್ತಿದೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿರುವುದಕ್ಕೆ ಮುಸ್ಲಿಮ್ ಮುಖಂಡರು ಕಾಂಗ್ರೆಸ್ ವಿರುದ್ಧ ಮಾತಾಡುತ್ತಿದ್ದಾರೆ. ಸಚಿವ ಜಮೀರ್ ಅಹ್ಮದ್ ಅವರನ್ನೂ ಟಾರ್ಗೆಟ್ ಮಾಡಲಾಗುತ್ತಿದೆ. ಇಡೀ ಪಕ್ಷ ಹಾಗೂ ಸರ್ಕಾರ ಸಂಪೂರ್ಣ ಗೊಂದಲದಲ್ಲಿದೆ. ಇಂದೇ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಬರಲಿದೆ. ಬಾಗಲಕೋಟೆ ಹಾಗೂ ದಾವಣಗೆರೆಯಲ್ಲಿ ಬಿಜೆಪಿ ಗೆಲ್ಲಲಿದೆ. ನರೇಂದ್ರ ಮೋದಿ ಪ್ರಧಾನಿಯಾಗಿದ್ದಕ್ಕೆ ನಮಗೇನೂ ಸಮಸ್ಯೆಯಾಗಿಲ್ಲ, ಬಿಜೆಪಿ ಬೆಂಬಲಿಸುತ್ತೇವೆ ಎಂದು ಮುಸ್ಲಿಮರು ಹೇಳಿದ್ದಾರೆ. ಅವರ ಈ ನಡೆಯನ್ನು ಸ್ವಾಗತಿಸುತ್ತೇನೆ ಎಂದು ಅಶೋಕ್ ತಿಳಿಸಿದರು.
