ಹುಣಸೂರು: ಹುಣಸೂರಿನಲ್ಲಿ ರಾಗಿ ಖರೀದಿಯಲ್ಲಿ ಅವ್ಯವಹಾರ
ನಡೆಯುತ್ತಿದೆ ಎಂದು ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ ಆರೋಪಿಸಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಪತ್ರ ಬರೆದು ಗಮನ ಸೆಳೆದಿದ್ದಾರೆ.
ರಾಗಿ ಖರೀದಿ ಕೇಂದ್ರದಲ್ಲಿ ಇಂತಿಷ್ಟೇ ರಾಗಿ ಬಿಡಿಸಿಕೊಳ್ಳುತ್ತಿದ್ದು, ರಾಗಿ ತಂದ ವಾಹನಗಳಿಗೆ ಟೋಕನ್ ಕೊಟ್ಟು ರಾಗಿ ಬಿಡಿಸಿಕೊಳ್ಳುವ ಕಾನೂನು ಇದ್ದರೂ ಸಹ ರಾಗಿ ಖರೀದಿ ಕೇಂದ್ರದಲ್ಲಿ ಸರಿಯಾಗಿ ಟೋಕನ್ ಕೊಡದೆ ಖಾಸಗಿ ವಾಹನಗಳಲ್ಲಿ ಅವರ ಸರದಿ ಇಲ್ಲದಿದ್ದರೂ ಸಹ ರಾಗಿ ಖರೀದಿ ಮಾಡಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ದೂರಿದ್ದಾರೆ.
ಈ ಬಗ್ಗೆ ಹುಣಸೂರಿನ ನೊಂದ ರಾಗಿ ಬೆಳೆದ ರೈತರು ನಮ್ಮ ಪಕ್ಷಕ್ಕೆ ದೂರು ಸಲ್ಲಿಸಿದ್ದಾರೆ. ನಾವು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು,ರೈತರು ನೀಡಿರುವ ದೂರಿನಂತೆ ರಾಗಿ ಖರೀದಿಯಲ್ಲಿ ಗೋಲ್ಮಾಲ್ ನಡೆಯುತ್ತಿರುವುದು ಕಂಡು ಬಂದಿದೆ ಎಂದು ಚೆಲುವರಾಜು ತಿಳಿಸಿದ್ದಾರೆ.
ತಮ್ಮ ಸರದಿ ಬರುತ್ತದೆಂದು ಕಾಯುತ್ತಾ ನಿಂತ ರೈತರು ಬೆಳಗ್ಗಿನಿಂದ ಸಂಜೆ ತನಕ ಕಾದು ವಾಪಸ್ಸು ಹೋಗುವ ಸಂದರ್ಭದಲ್ಲಿ ಗೇಟ್ ಬಳಿ ಟೋಕನ್ ಕೊಡುತ್ತಿರುವುದು ಕಂಡು ಬಂದಿರುತ್ತದೆ.
ಕಷ್ಟಪಟ್ಟು ಬೆಳೆ ಬೆಳೆದ ರೈತರಿಗೆ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಈ ರೀತಿ ಮಾಡಿದರೆ ಹೇಗೆ, ಸರ್ಕಾರದ ಕಾನೂನಿನಂತೆ ಒಂದು ದಿನಕ್ಕೆ ಇಂತಿಷ್ಟೇ ರಾಗಿ ಖರೀದಿ ಎಂದು ಹಾಗೂ ಪಹಣಿ ಪ್ರಕಾರವಾಗಿ ನೊಂದಾಯಿಸಿಕೊಂಡ ರೈತರ ರಾಗಿಯನ್ನು ಮಾತ್ರ ಖರೀದಿ ಮಾಡಬೇಕು. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.
ಗೋಲ್ ಮಾಲ್ ಮಾಡುವುದನ್ನು ಮುಂದುವರಿಸಿರುವುದು ಕಂಡು ಬಂದಲ್ಲಿ ಎ.ಪಿ.ಎಂ.ಸಿ ಆವರಣದಲ್ಲಿ ಅವ್ಯವಹಾರದ ಬಗ್ಗೆ ನೊಂದ ರೈತರೊಂದಿಗೆ ಸೇರಿ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಎಚ್ಚರಿಸಿದ್ದಾರೆ.
