ಮೈಸೂರು: ಬಿಜೆಪಿಯ ಅಪಪ್ರಚಾರಕ್ಕೆ ಅಭಿವೃದ್ದಿ ಕಾರ್ಯಗಳ ಮೂಲಕವೇ ಉತ್ತರ ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯವರಿಗೆ ಟಾಂಗ್ ನೀಡಿದರು.
ನಮ್ಮ ಅಭಿವೃದ್ಧಿ ಕಾರ್ಯಗಳು ಜನರಿಗೆ ಮುಟ್ಟಿವೆ,ಜನ ನಮ್ಮ ಪರವಾಗಿದ್ದಾರೆ ಎಂದು ತಿಳಿಸಿದರು.
ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್ ವತಿಯಿಂದ ಪಿರಿಯಾಪಟ್ಟಣದ ಪಾರೆಕೊಪ್ಪಲಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಕ್ತಿ ದೇವತೆ ಶ್ರೀ ಮಸಣಿಕಮ್ಮ ದೇವಸ್ಥಾನ ನಿರ್ಮಾಣ, ಒಕ್ಕಲಿಗ ಸಂಘದ ಸಹಯೋಗದೊಂದಿಗೆ ನಿರ್ಮಿಸುತ್ತಿರುವ ಕುವೆಂಪು ಭವನ ಹಾಗೂ ಬೆಟ್ಟದ ಪುರ ಗ್ರಾಮದ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬೆಟ್ಟಕ್ಕೆ ಹೋಗುವ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಇಲಾಖೆಗಳ 419.78 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಸಿಎಂ ಮಾತನಾಡಿದರು.
ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾಮಗಾರಿಗಳು ಆಗುತ್ತಿದೆ, ಈ ಬಾರಿಯ ಆಯವ್ಯಯದಲ್ಲಿ ಸುಮಾರು 82 ಸಾವಿರ ಕೋಟಿ ರೂಗಳನ್ನು ಅಭಿವೃದ್ಧಿ ಕೆಲಸಗಳಿಗೆ ಮೀಸಲಿರಿಸಿದ್ದೇವೆ ಎಂದು ಸಿಎಂ ತಿಳಿಸಿದರು.
ಕುವೆಂಪು ಅವರು ವಿಶ್ವಮಾನವರಾಗುವ ಪ್ರಯತ್ನವನ್ನು ಮಾಡಿದ್ದರು. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸಬೇಕು ಎಂದು ಬಯಸಿದ್ದರು. ಎಲ್ಲರೂ ಮನುಷ್ಯರಾಗಿ ಬಾಳಬೇಕೆನ್ನುವ ಆಶಯವನ್ನು ಹೊಂದಿದ್ದ ಕುವೆಂಪು ಅವರ ಭವನ ಇಲ್ಲಿ ನಿರ್ಮಾಣವಾಗುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಬೆಟ್ಟದಪುರ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬೆಟ್ಟಕ್ಕೆ ಹೋಗುವ ರಸ್ತೆ ನಿರ್ಮಾಣ ಕಾಮಗಾರಿಯನ್ನು 50 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಮೂರು ವರ್ಷಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಮುಂದೆಯೂ ಈ ಯೋಜನೆಗಳನ್ನು ಮುಂದುವರೆಸಲಾಗುವುದು, ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಅಭಿವೃದ್ಧಿಗೂ ಹಣವನ್ನು ಮೀಸಲಿರಿಸಿದೆ ಎನ್ನಲು ಇಂದು ಶಂಕು ಸ್ಥಾಪನೆಯಾಗಿರುವ 419.78 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳೇ ಸಾಕ್ಷಿ ಎಂದು ಸಿದ್ದು ತಿಳಿಸಿದರು.
ವಿರೋಧ ಪಕ್ಷಗಳು ಅನಗತ್ಯವಾಗಿ ಟೀಕೆ ಮಾಡುತ್ತಿದ್ದು ಅದರಲ್ಲಿ ಸತ್ಯಾಂಶವಿಲ್ಲ. ಟೀಕೆಗಳು ವಾಸ್ತವದ ನೆಲೆಗಟ್ಟಿನಲ್ಲಿರಬೇಕು. ಸುಳ್ಳು ಹೇಳುವುದನ್ನೇ ಕಸಬು ಮಾಡಿಕೊಳ್ಳದೆ ಕೈಗೊಂಡಿರುವ ಕೆಲಸಗಳ ಬಗ್ಗೆ ಮಾತನಾಡಬೇಕು ಸಲಹೆ ನೀಡಿದರು.
ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದ್ದು, 2028ರ ಚುನಾವಣೆಯಲ್ಲಿಯೂ ಗೆಲ್ಲಲಿದ್ದೇವೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ವೆಂಕಟೇಶ್, ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಶಾಸಕರಾದ ಹರೀಶ್ ಗೌಡ ರವಿಶಂಕರ್, ದರ್ಶನ್ ಧ್ರುವನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
