ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಶಾಂತವಾಗಿ ನಡೆದು ಮೇಯರ್ ಆಗಿ ಪ್ರೀತಿ ಕಾಮಕರ ಹಾಗೂ ಉಪ ಮೇಯರ್ ಆಗಿ ಹನುಮಂತ ಕೊಂಗಾಲಿ ಆಯ್ಕೆಯಾಗಿದ್ದಾರೆ.
ಮೇಯರ್,ಉಪ ಮೆರಯರ್ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದವು.
ಬಿಜೆಪಿ ನಾಯಕರು ನೇಕಾರರ ಸಮುದಾಯಕ್ಕೆ ಮೇಯರ್ ಪಟ್ಟ, ಲಿಂಗಾಯತ ಸಮುದಾಯಕ್ಕೆ ಉಪ ಮೇಯರ್ ಪಟ್ಟ ನೀಡುವ ಮೂಲಕ ಜಾತಿ ಸಮೀಕರಣದ ಟ್ರಂಪ್ ಕಾರ್ಡ್ ಪ್ರಯೋಗಿಸಿದ್ದರು,ಅದು ಫಲ ಕೊಟ್ಟಿದೆ.
ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಪ್ರೀತಿ ಕಾಮಕರ ಹಾಗೂ ಉಪ ಮೇಯರ್ ಸ್ಥಾನಕ್ಕೆ ಹನುಮಂತ ಕೊಂಗಾಲಿ ನಾಮಪತ್ರ ಸಲ್ಲಿಸಿದ್ದರು,ಅಂದುಕೊಂಡಂತೆ ಇವರಿಬ್ಬರೇ ಮೇಯರ್,ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಮೇಯರ್ ಸ್ಥಾನಕ್ಕೆ ಖರ್ಷಿದ ಮುಲ್ಲಾ ಹಾಗೂ ಉಪ ಮೇಯರ್ ಸ್ಥಾನಕ್ಕೆ ಮೋದಿನಸಾಬ್ ಮತವಾಲೆ ನಾಮಪತ್ರ ಸಲ್ಲಿಸಿದ್ದರು.
ಬುಧವಾರ ಮಧ್ಯಾಹ್ನವೇ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಕೈ ಎತ್ತುವ ಮೂಲಕ ಮತದಾನ ಪ್ರಕ್ರಿಯೆ ನಡೆಯಿತು.
ಪಾಲಿಕೆಯಲ್ಲಿ ಒಟ್ಟು 58 ಸದಸ್ಯರಿದ್ದು, ಬಿಜೆಪಿ 38 ಸದಸ್ಯರೊಂದಿಗೆ ಸ್ಪಷ್ಟ ಬಹುಮತ ಹೊಂದಿದೆ.
ಕಾಂಗ್ರೆಸ್ ಹಾಗೂ ಪಕ್ಷೇತರರು ಸೇರಿ 20 ಸದಸ್ಯರ ಬಲವಿದ್ದು ಮೇಯರ್ ಮತ್ತು ಉಪ ಮೇಯರ್ ಪಟ್ಟ ಬಿಜೆಪಿ ಪಾಲಾಗಿದೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರಕ್ಕೆ ಮೇಯರ್ ಸ್ಥಾನ ಹಾಗೂ ಬೆಳಗಾವಿ ಉತ್ತರ ಮತಕ್ಷೇತ್ರಕ್ಕೆ ಉಪ ಮೇಯರ್ ಸ್ಥಾನ ಹಂಚಿಕೆ ಮಾಡಲಾಗಿದ್ದು, ಮಾಜಿ ಶಾಸಕ ಅನಿಲ್ ಬೆನಕೆ ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಪ್ರಮುಖ ಪಾತ್ರ ವಹಿಸಿದರು.
