ಚಾಮರಾಜನಗರ: ರಾಜ್ಯದಲ್ಲಿ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿರುವ ಬೆನ್ನಲ್ಲೇ, ವರುಣ ದಿಢೀರ್ ಪ್ರತ್ಯಕ್ಷನಾಗಿ ಧರೆಗೆ ತಂಪೆರೆದಿದ್ದಾನೆ.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುತ್ತಿದ್ದು, ಅದೇ ರೀತಿ ಚಾಮರಾಜನಗರದಲ್ಲುಇ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ.
ಯಳಂದೂರು,ಚಾಮರಾಜನಗರ ತಾಲ್ಲೂಕಿನ ವೀರನಪುರ, ಯಡಪುರ, ತಮ್ಮಡಹಳ್ಳಿ, ಮರಿಯಾಲ, ಕಡುವಿನ ಕಟ್ಟೆ ಹುಂಡಿ ಗ್ರಾಮಗಳ ಸುತ್ತಮುತ್ತ ಆಲಿಕಲ್ಲು ಮಳೆ ಸುರಿದಿದೆ.
ಏಕಾಏಕಿ ಸುರಿದ ಮಳೆಗೆ ಜನ ಕಂಗಾಲಾಗಿದ್ದಾರೆ.
ಮಂಗಳವಾರ ಮತ್ತು ಬುಧವಾರ ಕೆಲ ಸಮಯ ಆಲಿಕಲ್ಲು ಸಹಿತ ಬಿರುಸಿನ ಮಳೆ ಸುರಿಯಿತು.
ಮಂಗಳವಾರ ದೊಡ್ಡ ಗಾತ್ರದ ಆಲಿಕಲ್ಲು ಮಂಜುಗಡ್ಡೆ ರೀತಿ ಬಿದ್ದಿದ್ದು ಅಚ್ಚರಿ ಮೂಡಿಸಿದೆ. ಈ ಬಾರಿ ಮೊದಲ ವರ್ಷಧಾರೆ ಆಲಿಕಲ್ಲು ಸಹಿತ ಸುರಿದಿರುವುದು ಆಶ್ಚರ್ಯ ಮೂಡಿಸಿದೆ.
ಮನೆಗಳ ಮುಂದೆ ಹಾಗೂ ರಸ್ತೆಯುದ್ದಕ್ಕೂ ಆಲಿಕಲ್ಲು ರಾಶಿ,ರಾಶಿಯಾಗಿ ಬಿದ್ದಿತ್ತು.ಮನೆಯವರು ಆಲಿಕಲ್ಲು ಸಂಗ್ರಹಿಸಿದರೆ,ರಸ್ತೆಯಲ್ಲಿ ಜನರು ಮತ್ತು ಶಾಲಾ ವಿದ್ಯಾರ್ಥಿಗಳು ಖುಷಿಯಿಂದ ಬಾಟಲಿಗಳಲ್ಲಿ ಆಲಿಕಲ್ಲು ಸಂಗ್ರಹಿಸುತ್ತಿದ್ದರು.
