ಹುಣಸೂರು: ಹುಣಸೂರು ತಾಲೂಕು ಹೊನ್ನಿಕುಪ್ಪೆ ಗ್ರಾಮದ ಚುಂಚನ ಕೆರೆಯಿಂದ ಉದ್ದೂರಿಗೆ ಹೋಗುವ ಭಾಗದಲ್ಲಿ ಕಾಲುವೆ ಏರಿ ಬಹಳ ಹಾಳಾಗಿದ್ದು ರೈತರು ಜಮೀನಿಗೆ ಹೋಗಲು ತೀವ್ರ ತೊಂದರೆಯಾಗಿದೆ.
ನಿನ್ನೆ ಮತ್ತು ಇಂದು ಮಳೆ ಸುರಿದು ಏರಿ ಹಳ್ಳಗಳಾಗಿ ನೀರಿನಿಂದ ಕೂಡಿದೆ,ಕೆಸರುಗದ್ದೆಯಾಗಿದೆ, ಹಾಗಾಗಿ ಯಾವುದೇ ವಾಹನಗಳು ಸಂಚರಿಸಲು ಸಾಧ್ಯವೇ ಇಲ್ಲದಂತಾಗಿದೆ ಇದು ಯಮಸ್ವರೂಪಿಯಾಗಿ ಪರಿಣಮಿಸಿದೆ ಎಂದು ಕರ್ನಾಟಕ ಪ್ರಜಾಪಾರ್ಟಿ ರೈತಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಸಾವಿರಾರು ಎಕರೆ ಜಮೀನು ಇದ್ದು ರೈತಾಪಿ ಜನ ಇದೇ ಕಾಲುವೆ ಮೂಲಕವೇ ಹೋಗಬೇಕು.ಇಲ್ಲಿನ ಏರಿ ಸರಿಪಡಿಸಿ ಎಂದು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ ಆದರೆ ಏನೂ ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದಾರೆ.
ಈ ಕಾಲಯವೆ ಹಾರಂಗಿ ಐದನೆ ಚಾನೆಲ್ ಗೆ ಸೇರಿದೆ ಅಲ್ಲಿನ ಇಂಜಿನಿಯರ್ ಗಳಿಗೂ ಹೇಳಿದ್ದೇವೆ.ನಮ್ಮ ಜನಪ್ರತಿನಿಧಿಗಳೂ ಯಾರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ನಾವು ಯಾರಿಗೆ ಕೇಳಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಏರಿಯ ಮೇಲೆ ಹೋಗಬೇಕಾದರೆ ಜೀವ ಕೈನಲ್ಲಿ ಹಿಡಿದು ಹೋಗಬೇಕು, ದ್ವಿಚಕ್ರ ವಾಹನ ವಾಗಲಿ ವ್ಯಾನ್ ಗಳಾಗಲಿ ಸ್ಕಿಡ್ ಆಗುತ್ತವೆ.ಅದು ಯಾವಾಗ ಅನಾಹುತ ವಾಗವುದೊ ಎಂಬ ಜೀವ ಭಯದಲ್ಲಿ ರೈತರು,ಸ್ಥಳೀಯರು ಹೋಗಬೇಕಿದೆ.
ಕೂಡಲೇ ಸಂಬಂಧಪಟ್ಟ ಇಂಜಿನಿಯರ್ ಗಳು,ಜನಪ್ರತಿನಿಧಿಗಳು, ಅಧಿಕಾರಿಗಳು ಹೊನ್ನಿಕುಪ್ಪೆಗೆ ಬಂದು ಇಲ್ಲಿನ ಸ್ಥಿತಿಯನ್ನು ಕಣ್ಣಾರೆ ಕಂಡು ಕಾಲುವೆ ಏರಿ ಸರಿಪಡಿಸಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.
