(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕರ್ನಾಟಕದ ನಯಾಗಾರ ಎಂದು ಪ್ರಸಿದ್ಧಿಯಾಗಿರುವ ಶಿವನಸಮುದ್ರ ಈ ಹಿಂದೆ ಗಂಗರ ಆಳ್ವಿಕೆಗೆ ಒಳಪಟ್ಟಿತ್ತು ಇದು ತನ್ನೊಡಲಿನಲ್ಲಿ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳನ್ನು ಇರಿಸಿಕೊಂಡಿರು ವುದರಿಂದ ಪ್ರವಾಸಿಗರ ಸ್ವರ್ಗ ಎಂದೆ ಹೆಸರು ವಾಸಿಯಾಗಿದೆ.
ಇಲ್ಲಿನ ಭರಚುಕ್ಕಿ ಹಾಗೂ ಗಗನಚುಕ್ಕಿ ಜಲಪಾತಗಳನ್ನು ವೀಕ್ಷಿಸಲು ಇಲ್ಲಿಗೆ ಸಹಸ್ರಾರು ಪ್ರವಾಸಿಗರು ಬಂದು ಹೋಗುತ್ತಾರೆ.
ಇಲ್ಲಿನ ಮಧ್ಯ ರಂಗನಾಥ (ಜಗನ್ಮೋಹನ ಶ್ರೀರಂಗನಾಥ) ಸ್ವಾಮಿ, ಪ್ರಸನ್ನ ಮೀನಾಕ್ಷಿ ಸಮೇತ ಶ್ರೀ ಸೋಮೇಶ್ವರ (ಶ್ರೀಚಕ್ರ) ದೇವಾಲಯ ಹಾಗೂ ಮುಸ್ಲಿಂ ಸಂತ ಮರ್ದಾನೆ ಗೈಯಿಬ್ ಅವರ ದರ್ಗಾ ಇರುವುದರಿಂದ ಸಾವಿರಾರು ಮಂದಿ ಬಂದು ಹೋಗುತ್ತಿದ್ದಾರೆ.
ಆದರೆ ಇಲ್ಲಿನ ರಸ್ತೆ ಗುಂಡಿ ಬಿದ್ದು ತೀರಾ ಹದಗೆಟ್ಟುಹೋಗಿದೆ.ಸಧ್ಯ ಈ ರಸ್ತೆ ಅಭಿವೃದ್ಧಿಗೆ ಹನೂರು ಶಾಸಕ ಎಂ.ಆರ್ ಮಂಜುನಾಥ್ ಮುಂದಾಗಿ,ಚಾಲನೆ ನೀಡಿದ್ದಾರೆ.
ಇಲ್ಲಿನ ಜಗನ್ಮೋಹನ ರಂಗನಾಥಸ್ವಾಮಿ ದೇವಾಲಯದ ಮುಂಭಾಗದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಈಡುಗಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು ಸುಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣ ಶಿವನಸಮುದ್ರ ವಜ್ರವಿದ್ದಂತೆ. ಇದನ್ನು ಸದಾ ಹೊಳೆಯುತ್ತಿರುವಂತೆ ಮಾಡಬೇಕು ಎಂದು ತಿಳಿಸಿದರು.
ಇಲ್ಲಿನ ಸಮೂಹ ದೇವಾಲಯಗಳು, ಮತ್ತು ಎರಡು ಪ್ರವಾಸಿ ತಾಣಗಳಿಗೆ ಪ್ರತಿದಿನ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ರಸ್ತೆ ಸರಿ ಇಲ್ಲದೆ ಗುಂಡಿಗಳಾಗಿದೆ.
ರಾಷ್ಟ್ರೀಯ ಹೆದ್ದಾರಿ 209 ರಸ್ತೆಯ ಅಭಿವೃದ್ಧಿಯ ಸಿ ಆರ್ ಎಫ್ ಅನುದಾನ 75 ಲಕ್ಷ ಉಳಿತಾಯವಾಗಿದ್ದು ಈ ಅನುದಾನವನ್ನು ಹಾಳಾಗಿರುವ ಈ ರಸ್ತೆ ಅಭಿವೃದ್ಧಿಗೆ ಬಳಸಿಕೊಂಡು ಸುಮಾರು ಎರಡುವರೆ ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಕಾಮಗಾರಿಗೆ 75 ಲಕ್ಷ ಅನುದಾನ ಸಾಲುವುದಿಲ್ಲ, ನನ್ನ ಶಾಸಕರ ನಿಧಿಯಿಂದ 20 ಲಕ್ಷ ನೀಡಿ,ಒಟ್ಟು 95 ಲಕ್ಷ ರೂ. ಅನುದಾನದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆಗೆ ಮಾಡಿದ್ದೇನೆಂದು ಹೇಳಿದರು.
ಮುಸ್ಲಿಂ ಸಂತ ನೆಲೆಸಿರುವ ದರ್ಗಾ ಮುಸ್ಲಿಮರ ಪವಿತ್ರ ಸ್ಥಳ, ಇಲ್ಲಿಗೆ ರಾಜ್ಯ ಹಾಗೂ ಇನ್ನಿತರ ರಾಜ್ಯಗಳಿಂದ ಮುಸ್ಲಿಂ ಸಮುದಾಯದವರು ಆಗಮಿಸುತ್ತಿದ್ದಾರೆ. ಈ ಪವಿತ್ರ ಸ್ಥಳವನ್ನು ಸುಂದರವಾಗಿ ಅಭಿವೃದ್ಧಿಪಡಿಸ ಬೇಕಿದೆ ಎಂದು ತಿಳಿಸಿದರು.
ದರ್ಗಾದ ಸುತ್ತಮುತ್ತ ಸುಮಾರು ವರ್ಷಗಳಿಂದಲೂ ಒಂದಷ್ಟು ಕುಟುಂಬಗಳು ವಾಸ ಮಾಡುತ್ತಿದ್ದು ಇಲ್ಲೇ ಹೋಟೆಲ್ ಮತ್ತು ಅಂಗಡಿ ಇಟ್ಟು ಜೀವನ ಮಾಡುತ್ತಿವೆ. ಈ ಸ್ಥಳವನ್ನು ಸುಂದರವಾಗಿ ಅಭಿವೃದ್ಧಿಪಡಿಸಲು ದರ್ಗಾದ ಸುತ್ತಮುತ್ತ ಇರುವ ಅಂಗಡಿಗಳು, ಹೋಟೆಲ್ ಗಳನ್ನು ಸುಮಾರು 200 ಮೀಟರ್ ದೂರಕ್ಕೆ ಸ್ಥಳಾಂತರ ಮಾಡ ಬೇಕಿದೆ. ಇದರ ಅಭಿವೃದ್ಧಿ ಮಾಡಲು ವಕ್ಫ್ ಸಚಿವ ಜಮೀರ್ ಅಹಮದ್ ಅವರಲ್ಲಿ 8.5 ಕೋಟಿ ಅನುದಾನ ಬೇಡಿಕೆ ಇಟ್ಟಿದ್ದೇನೆ ಇದಕ್ಕೆ ಸಚಿವರು ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಸಚಿವರನ್ನೇ ಕರೆತಂದು ಕೆಲಸ ಮಾಡಿಸುತ್ತೇನೆ ಎಂದು ಶಾಸಕ ಎಂ.ಆರ್ ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ಸತ್ತೇಗಾಲ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಮಲ್ಲೇಶ್, ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ನಂಜುಂಡ, ಗುತ್ತಿಗೆದಾರ ಹ್ಯಾಂಡ್ಪೋಸ್ಟ್ ಮಹದೇವ, ಶಿವನಸಮುದ್ರ ಮಾರಮ್ಮನ ದೇವಸ್ಥಾನದ ಅರ್ಚಕ ಚಿಕ್ಕರವಳಿ, ಮುಖಂಡರಾದ ಚೆನ್ನಪುರ ರಾಜು, ಶಾಂತರಾಜು, ಚೇತನ್, ಪನ್ನಾಡಿ ನಾಯಕ, ವಿಜಯಕುಮಾರ್, ಎನ್. ಹೆಚ್. ಎಇಇ ಪ್ರಕಾಶ್, ಅರ್ಚಕರಾದ ಶ್ರೀನಿವಾಸ್, ಶ್ರೀಧರ್ ಭಟ್ ಮತ್ತಿತರರು ಹಾಜರಿದ್ದರು.
