ಮೈಸೂರು: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಫೆಬ್ರವರಿ 14ರಂದು ಲೋಕ ಕಲ್ಯಾಣಕ್ಕಾಗಿ ‘ಸಾಮೂಹಿಕ ಹನುಮಾನ್ ಚಾಲೀಸಾ’ ಪಾರಾಯಣ ಹಮ್ಮಿಕೊಳ್ಳಲಾಗಿದೆ ಎಂದು ಅವಧೂತ ದತ್ತ ಪೀಠದ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಶ್ರೀಗಳು ಹನುಮಾನ್ ಚಾಲೀಸಾ ಪಾರಾಯಣ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ವಿಶೇಷ:
ತುಳಸೀದಾಸರು ರಚಿಸಿರುವ ಹನುಮಾನ್ ಚಾಲೀಸಾ ಅತ್ಯಂತ ಪವಿತ್ರವಾದದ್ದು ಹಾಗೂ ಸುಂದರಕಾಂಡ ಮತ್ತು ಸಂಪೂರ್ಣ ರಾಮಾಯಣದ ಸಾರವನ್ನು ಒಳಗೊಂಡಿದೆ ಎಂದು ಶ್ರೀಗಳು ತಿಳಿಸಿದರು.
ಫೆಬ್ರವರಿ 14ರಂದು ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಒಗ್ಗೂಡಿ ಹನುಮಾನ್ ಚಾಲೀಸಾ ಪಾರಾಯಣ ಮಾಡಲಿದ್ದಾರೆ ಎಂದು ಹೇಳಿದರು.
ಈ ಹಿಂದೆ ತೆನಾಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷ ಭಕ್ತರು ಪಾಲ್ಗೊಂಡು ವಿಶ್ವ ದಾಖಲೆ ನಿರ್ಮಿಸಿದ್ದರು ಎಂದು ಸ್ಮರಿಸಿದರು.
ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ:
ಹನುಮಾನ್ ಚಾಲೀಸಾ ಎಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ಹಾಡಬಹುದಾದ ಸುಲಭ ಹಾಗೂ ಶಕ್ತಿಶಾಲಿ ಸ್ತೋತ್ರ. ಹನುಮಂತನು ರಕ್ಷಕನಾಗಿದ್ದು, ಕಷ್ಟದ ಸಮಯದಲ್ಲಿ ನಮ್ಮನ್ನು ಕಾಪಾಡುತ್ತಾನೆ. ಲೋಕ ಕಲ್ಯಾಣಕ್ಕಾಗಿ ಮತ್ತು ಜಗತ್ತಿನ ಒಳಿತಿಗಾಗಿ ಈ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜಿಸಲಾಗಿದೆ, ಎಂದು ಗಣಪತಿ ಶ್ರೀಗಳು ತಿಳಿಸಿದರು.
ಶಿವರಾತ್ರಿಯ ಮಹತ್ವ:
ಮರುದಿನವೇ ಶಿವರಾತ್ರಿ ಹಬ್ಬವಿರುವುದು ಈ ಕಾರ್ಯಕ್ರಮದ ವಿಶೇಷತೆಯನ್ನು ಹೆಚ್ಚಿಸಿದೆ. ಹನುಮಂತನು ಶಿವನ ಅಂಶ ಹಾಗೂ ರಾಮನ ಪ್ರಿಯ ಭಕ್ತ.ಈ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ಪಾರಾಯಣ ಮಾಡುವುದು ಅತ್ಯಂತ ಫಲಪ್ರದ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪಾರಾಯಣ ಮಾಡಿ ಎಂದು ಶ್ರೀಗಳು ಸಲಹೆ ನೀಡಿದರು.
ಸಾಮೂಹಿಕ ಪ್ರಾರ್ಥನೆಯ ಶಕ್ತಿ:
ಒಬ್ಬರೇ ಪ್ರಾರ್ಥಿಸುವುದಕ್ಕಿಂತ ಸಾಮೂಹಿಕವಾಗಿ ಪ್ರಾರ್ಥಿಸುವುದರಲ್ಲಿ ಅಪಾರ ಶಕ್ತಿಯಿದೆ. ಪುರಾಣಗಳ ಪ್ರಕಾರ, ರಾಮಾವತಾರಕ್ಕೆ ಮುನ್ನ 33 ಕೋಟಿ ದೇವತೆಗಳು ಒಗ್ಗೂಡಿ ಪ್ರಾರ್ಥಿಸಿದಾಗ ಭಗವಂತನು ಪ್ರತ್ಯಕ್ಷನಾಗಿ ರಾವಣ ಸಂಹಾರದ ಭರವಸೆ ನೀಡಿದ್ದನು. ಅದೇ ರೀತಿ, ಲಕ್ಷಾಂತರ ಜನರು ಒಟ್ಟಾಗಿ ಸೇರಿ ಹನುಮಾನ್ ಚಾಲೀಸಾ ಪಾರಾಯಣ ಮಾಡಿದಾಗ ಪ್ರತಿಯೊಬ್ಬರಿಗೂ ಆ ಸಂಪೂರ್ಣ ಪಾರಾಯಣದ ಪುಣ್ಯ ಲಭಿಸುತ್ತದೆ ಎಂದು ಶ್ರೀಗಳು ಸಾಮೂಹಿಕ ಪ್ರಾರ್ಥನೆಯ ಮಹತ್ವವನ್ನು ವಿವರಿಸಿದರು.
ಕರ್ನಾಟಕವು ಹನುಮನ ನಾಡು. ಇಲ್ಲಿನ ಭಕ್ತರೆಲ್ಲರೂ ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡು ಹನುಮಂತನ ಕೃಪೆಗೆ ಪಾತ್ರರಾಗಬೇಕು,ನಿಮ್ಮ ಜೊತೆಯಲ್ಲಿ ನಾನೂ ಇರುತ್ತೇನೆ, ನಾನೂ ಹಾಡುತ್ತೇನೆ. ಹನುಮಂತನ ರಕ್ಷೆ ಎಲ್ಲರಿಗೂ ಸಿಗಲಿ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶೀರ್ವದಿಸಿದರು.
ಸಾಮೂಹಿಕವಾಗಿ ಎಲ್ಲರೂ ಸೇರಿದಾಗ, ಒಬ್ಬೊಬ್ಬರ ಪ್ರಾರ್ಥನೆಯ ಫಲವೂ ಎಲ್ಲರಿಗೂ ದೊರೆಯುತ್ತದೆ, ಇದೇ ಸಾಮೂಹಿಕ ಪ್ರಾರ್ಥನೆಯ ವಿಶೇಷ ಎಂದು ತಿಳಿಸಿದರು.
ಫೆಬ್ರವರಿ 14ರ ದಿನದಂದೇ ಹನುಮಾನ್ ಚಾಲೀಸಾ ಪಾರಾಯಣ ಮಹಾ ಯಜ್ಞಕ್ಕೆ ಏಕೆ ಆದ್ಯತೆ ನೀಡಿದ್ದೇವೆ ಎಂದರೆ ಆ ದಿನ ಸೀತಾರಾಮರು ಒಂದಾದ ದಿನ ಹಾಗಾಗಿ ಆ ದಿನವನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀಗಳು ವಿವರಿಸಿದರು.
ಹನುಮಾನ್ ಚಾಲೀಸಾ ಸಂದರ್ಭದಲ್ಲಿ ಪ್ರತಿಯೊಬ್ಬ ಭಕ್ತರಿಗೂ ಪ್ರಸಾದ ವಿನಿಯೋಗ ಏರ್ಪಡಿಸಿದ್ದೇವೆ ಎಂದು ಹೇಳಿದರು.
ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞಕ್ಕೆ ನಮ್ಮೊಂದಿಗೆ ಮೈಸೂರಿನ ಹಲವಾರು ಸಂಘ ಸಂಸ್ಥೆಗಳು ಕೂಡಾ ಕೈಜೋಡಿಸಿವೆ ಇಂದು ಶ್ರೀಗಳು ತಿಳಿಸಿದರು.
