ಮೈಸೂರು: ಮೈಸೂರು ನಗರವನ್ನು ಡ್ರಗ್ಸ್ ಜಾಲಮುಕ್ತ ಮಾಡಬೇಕೆಂಬ ಪಣ ತೊಟ್ಟಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಪ್ರತೀ ದಿನ ಕನಿಷ್ಠ 8 ತಾಸು ನಗರದ ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ನಡೆಸುವಂತೆ ಆಯಾ ಠಾಣೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಅದರಂತೆ ರಾತ್ರಿಯಿಂದಲೇ ಕಾರ್ಯಾಚರಣೆಗಿಳಿದ ಪೊಲೀಸರು, ನಗರಕ್ಕೆ ಬರುವ ವಾಹನಗಳನ್ನು ಪ್ರಮುಖ ರಸ್ತೆಗಳಲ್ಲಿ ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಾರೆ.
ಅನ್ಯರಾಜ್ಯಗಳ ವಾಹನಗಳ ಮೇಲೆ ತೀವ್ರ ನಿಗಾ ವಹಿಸಿ ತಪಾಸಣೆ ನಡೆಸುತ್ತಿದ್ದಾರೆ.ನಗರದ ಕೈಗಾರಿಕಾ ಬಡಾವಣೆಗಳು, ರಾಸಾಯನಿಕ ಕಾರ್ಖಾನೆಗಳು, ಜನನಿಬಿಡ ಪ್ರದೇಶದಿಂದ ದೂರವಿರುವ ಒಂಟಿ ಮನೆಗಳನ್ನು ಪರಿಶೀಲಿಸುತ್ತಿದ್ದಾರೆ.
ಹೊರ ವರ್ತುಲ ರಸ್ತೆಯ ಅಂಚಿನಲ್ಲಿರುವ ಶೆಡ್ಗಳು ಹಾಗೂ ಮನೆಗಳ ಪರಿಶೀಲನೆ ನಡೆಸುತ್ತಿದ್ದಾರೆ.ಅದಕ್ಕಾಗಿ ಸಂಚಾರ ವಿಭಾಗ, ಶ್ವಾನದಳ, ಅಪರಾಧ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರು ಸಾಥ್ ನೀಡಿದ್ದಾರೆ.
ಪ್ರತೀ ದಿನ ಬೆಳಿಗ್ಗೆ 4 ತಾಸು ಹಾಗೂ ಸಂಜೆ ನಂತರ ನಾಲ್ಕು ತಾಸು ಪರಿಶೀಲನಾ ಕಾರ್ಯ ನಡೆಯಲಿದೆ. ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಆಯುಕ್ತರು ಮನವಿ ಮಾಡಿದ್ದಾರೆ.
