ಮೈಸೂರು: ಪ್ರತಿ ಮನೆಯಲ್ಲಿ ಭಾರತದ ಸಂವಿಧಾನದ ಪ್ರತಿಯೊಂದು ಪ್ರತಿ ಮನೆಯಲ್ಲಿ ಇರಬೇಕು ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ. ಅಬ್ದುಲ್ ರಹಿಮಾನ್ ಎಂ ಅವರು ಸಲಹೆ ನೀಡಿದರು.
ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ 77ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನದಂತಹ ಶ್ರೇಷ್ಠ ಗ್ರಂಥವನ್ನು ಇರಿಸಿಕೊಳ್ಳುವುದು ಮಾನವ ಶ್ರೇಷ್ಠತೆಯ ಸಂಕೇತ ಎಂದು ಬಣ್ಣಿಸಿದರು.
ಹಿಂದೂ, ಮುಸ್ಲಿಂ, ಜೈನ, ಕ್ರಿಸ್ತ ಮತ್ತು ಇತರೆ ಧರ್ಮದ ವ್ಯಕ್ತಿಗಳಾಗಿ ನಾವು ನಮ್ಮ ನಮ್ಮ ಧರ್ಮಗಳ ಗ್ರಂಥವನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಸ್ವಾಭಾವಿಕ. ಆದರೆ, ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಅವನ ಧರ್ಮ ಮತ್ತು ಜಾತಿ ಎಲ್ಲವನ್ನು ಮೇಳೈಸುವಂತೆ ದೇಶದ ಪ್ರಜೆಯಾಗಿ ತನ್ನನ್ನು ತಾನು ಉಳಿಸಿಕೊಳ್ಳಲು ಮತ್ತು ತನ್ನತನವನ್ನು ಉಳಿಸಿ, ಬೆಳೆಸಿಕೊಳ್ಳಲು ಅನುವು ಮಾಡಿಕೊಡುವ ಭಾರತದ ಸಂವಿಧಾನವು ಅಗ್ರಗಣ್ಯವಾಗಿದೆ.ಹಾಗಾಗಿ ಭಾರತದ ಸಂವಿಧಾನವನ್ನು ಧರ್ಮಗ್ರಂಥಕ್ಕಿಂತಲೂ ಮಿಗಿಲಾಗಿ ಪ್ರತಿ ಮನೆಯಲ್ಲಿ ಇರಿಸಿಕೊಂಡು, ಪ್ರತಿಯೊಬ್ಬ ಭಾರತೀಯ ಪ್ರಜೆಯು ಅದನ್ನು ಅಧ್ಯಯನ ನಡೆಸುವುದು ಅಗತ್ಯ. ಜೊತೆಗೆ ಸಂವಿಧಾನದಲ್ಲಿರುವ ಅಂಶಗಳನ್ನು ಚಾಚು ತಪ್ಪದೇ ಪಾಲಿಸುವುದು ಕೂಡ ಮುಖ್ಯ,
ಎಂದು ಅವರು ಹೇಳಿದರು.
ಭಾರತದ ಸಂವಿಧಾನ ಪ್ರತಿಯೊಬ್ಬ ಪ್ರಜೆಯನ್ನು ಜಾತ್ಯತೀತವಾಗಿ ಮತ್ತು ಸಮಾನವಾಗಿ ಕಾಣುತ್ತದೆ. ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೇರಿದ್ದರೂ ಕೂಡ ಅವನು ಭಾರತೀಯ ಎಂಬ ಸ್ಥಾನವನ್ನು ನೀಡಿ ಮಾನ್ಯ ಮಾಡುತ್ತದೆ. ಹಾಗಾಗಿ, ಇಂತಹ ಸಂವಿಧಾನವನ್ನು ಭಾರತದ ಪ್ರಜೆಯಾಗಿ ಪ್ರತಿಯೊಬ್ಬರೂ ಓದಿ ಅರ್ಥೈಸಿಕೊಂಡು ಬಾಳಿದರೆ ದೇಶದಲ್ಲಿ ಸಹಿಷ್ಣತೆ, ಸಮಾನತೆ,ಸಹಬಾಳ್ವೆ ಇರಲಿದೆ, ಕೋಮು, ಜಾತಿ ಮತ್ತು ಲಿಂಗ ಹಾಗೂ ಇನ್ನಿತರ ಯಾವುದೇ ತಾರತಮ್ಯ ಕಾಣಿಸದೆ, ದೇಶವು ಅಭಿವೃದ್ಧಿ ಹೊಂದುತ್ತದೆ ಎಂದು ಡಾ. ಅಬ್ದುಲ್ ರಹಿಮಾನ್ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗ ವಹಿಸಿದ್ದ
ಡಾ. ಶ್ರೀಪಾದ್ ಎಚ್. ಆರ್. ಮತ್ತು ಡಾ. ರೆಹಮತ್ ಉಲ್ಲಾ ಜಿ ಅವರು ಮಾತನಾಡಿ
ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದು ಇಂದಿನ ಸಮಾಜದ ಕರ್ತವ್ಯ ಎಂದು ಹೇಳಿದರು.
ಅಧ್ಯಾಪಕ ಸಂಘದ ಕಾರ್ಯದರ್ಶಿ ರಮೇಶ ಕೆ.ಎಲ್. ಮಾತನಾಡಿದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಗೋವಿಂದರಾಜು ಸ್ವಾಗತಿಸಿ ವಂದನಾರ್ಪಣೆ ಮಾಡಿದರು.
ಪತ್ರಾಂಕಿತ ವ್ಯವಸ್ಥಾಪಕರಾದ ಮೀನಾಕ್ಷಿ ಆರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರತಿಮಾ ಕೆ ಆರ್, ಸಾಂಸ್ಕೃತಿಕ ಸಮಿತಿ ಖಜಾಂಚಿ ಬೃಂದಾ ಎನ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಬೃಂದಾ, ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು, ತರಗತಿ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
