ಮೈಸೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಲ್ಲಿ ಗಣರಾಜ್ಯೋತ್ಸವ ವಿಜ್ರಂಬಣೆಯಿಂದ ಆಚರಿಸಲಾಯಿತು.
ಕುಲಪತಿಗಳಾದ ಪ್ರೊ. ನಾಗೇಶ್ ವಿ ಬೆಟ್ಟಕೋಟಿ ಅವರು ಧ್ವಜಾರೋಹಣ ನೆರವೇರಿಸಿದರು.
ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಹಾಡುವುದರ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ನಮನ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಪ್ರೊ.ನಾಗೇಶ್ ವಿ ಬೆಟ್ಟಕೋಟಿ ಅವರು, ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನ ನಮ್ಮದು. ವಿಶ್ವಕ್ಕೆ ಮಾದರಿಯಾಗಿ ಎಲ್ಲರೂ ನಮ್ಮ ಸಂವಿಧಾನವನ್ನ ಅವಲೋಕನ ಮಾಡುವಂತಾಗಿದೆ ಎಂದು ಹೇಳಿದರು.
ನಮ್ಮ ವಿಶ್ವವಿದ್ಯಾಲಯದ ಅಭಿವೃದ್ಧಿ ಮತ್ತು ಬೆಳವಣಿಗೆಗಳನ್ನ ನಾವು ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಇಂದು ನಮ್ಮ ವಿಶ್ವವಿದ್ಯಾಲಯದ ನೂತನ ಆವರಣದಲ್ಲಿ ಪ್ರಥಮ ಬಾರಿಗೆ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ನಮ್ಮ ವಿಶ್ವವಿದ್ಯಾಲಯವು ದೇಶದ ಎರಡನೇ ಮತ್ತು ರಾಜ್ಯದ ಪ್ರಥಮ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ, ಸಾಂಸ್ಕೃತಿಕ ವಿಶ್ವವಿದ್ಯಾಲಯ, ಸಾಂಸ್ಕೃತಿಕವಾಗಿ ನಮ್ಮ ರಾಜ್ಯವನ್ನ ದೇಶವನ್ನ ಪ್ರತಿ ಬಿಂಬಿಸುವ ಅಥವಾ ಪ್ರತಿನಿಧಿಸುವ ಕಾರ್ಯಗಳನ್ನ ನಾವು ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಈಗಾಗಲೇ ನಮ್ಮ ವಿಶ್ವವಿದ್ಯಾಲಯವು ಔಟ್ಲುಕ್ ಮ್ಯಾಗ್ನನ್ನಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡಿದ್ದು ಇದು ಸಂತಸದ ವಿಚಾರ ಎಂದು ಹೇಳಿದರು.
ವಿಶ್ವವಿದ್ಯಾಲಯದಲ್ಲಿ ಹೊಸ ಕಟ್ಟಡ ನಿರ್ಮಾಣಗೊಂಡಿದ್ದು ತರಗತಿಗಳನ್ನು ಪ್ರಾರಂಭಿಸಲಾಗಿದೆ ಇನ್ನು ಮುಂದೆ ನ್ಯಾಕ್ ಮಾನ್ಯತೆ ಪಡೆಯಲು ಅಗತ್ಯವಾದ ಮೂಲಭೂತ ಸೌಕರ್ಯಗಳೆಲ್ಲವೂ ಸಿದ್ಧವಾಗಿದೆ. ರಾಜ್ಯಾದ್ಯಂತ ಸಂಗೀತಾದಿ ಪ್ರದರ್ಶನ ಕಲೆಗಳನ್ನ, ಶಿಕ್ಷಣ ರೂಪಕ್ಕೆ ತರುವುದು, ಆಧುನಿಕ ಗುರುಕುಲ ಪದ್ಧತಿಯಲ್ಲಿ ಅವುಗಳಿಗೆ ಶಿಕ್ಷಣ ನೀಡುವುದು, ಸಂಶೋಧನೆ ಮಾಡುವುದು, ವಸ್ತು ಸಂಗ್ರಹಾಲಯ ಮತ್ತು ಧ್ವನಿ ಮುದ್ರಣದ ಸಂಗ್ರಹಾಲಯವನ್ನ ನಿರ್ಮಾಣ ಮಾಡುವ ಕಾರ್ಯಗಳು ಹಂತ,ಹಂತವಾಗಿ ಸಾಗುತ್ತಿವೆ ಎಂದು ವಿವರಿಸಿದರು.
ಸಮಾಜ ಸೇವೆಗೆ, ಜ್ಞಾನಕ್ಕೆ ವೈದಿಕ ಶಿಕ್ಷಣಕ್ಕೆ ನಮ್ಮ ಕರ್ನಾಟಕಕ್ಕೆ ಐದು ಪದ್ಮಭೂಷಣ, ಪದ್ಮ ವಿಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳು ದೊರೆತಿವೆ. ಮುಂದಿನ ದಿನಗಳಲ್ಲಿ ನಮ್ಮ ವಿಶ್ವವಿದ್ಯಾಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ರೀತಿಯ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆಯುವಂತಾಗಲಿ ಎಂದು ಬೆಟ್ಟಕೋಟಿ ಹಾರೈಸಿದರು.
ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ ಎಂ.ಜಿ ಮಂಜುನಾಥ, ಹಣಕಾಸು ಅಧಿಕಾರಿಗಳಾದ ಸೌಮ್ಯಶ್ರೀ ಸಿ.ಪಿ ಮತ್ತಿತರರು ಉಪಸ್ಥಿತರಿದ್ದರು.
