ನಂಜನಗೂಡು: ಸಂವಿಧಾನ ಮೌಲ್ಯಗಳ ಸಂರಕ್ಷಣೆಯ ಸಂಕಲ್ಪದೊಂದಿಗೆ ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೊತ್ಸವ ಆಚರಣೆ ಮಾಡಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್.ದಿನೇಶ್ ಅವರು ಭಾರತೀಯ ತ್ರಿವರ್ಣ ಧ್ವಜಾರೋಹಣ ಮಾಡಿ ರಾಷ್ಟ್ರಕ್ಕೆ ಗೌರವ ಸಲ್ಲಿಸಿದರು.
ನಂತರ ರಾಷ್ಟ್ರಗಾನವನ್ನು ಸಮೂಹವಾಗಿ ಹಾಡಲಾಯಿತು. ಧ್ವಜಾರೋಹಣದ ಸಂದರ್ಭದಲ್ಲಿ ದೇಶಭಕ್ತಿಯ ವಾತಾವರಣ ಆವರಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್, ಭಾರತೀಯ ಸಂವಿಧಾನವು ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವದ ಆಧಾರಶಿಲೆ ಎಂದು ಹೇಳಿದರು.
ಸ್ವಾತಂತ್ರ್ಯ ನಂತರ ದೇಶವು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಹೋದರತ್ವದ ದಾರಿಯಲ್ಲಿ ಸಾಗಲು ಸಂವಿಧಾನವೇ ಮಾರ್ಗದರ್ಶಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಸಂವಿಧಾನದ ಮೂಲಭೂತ ಕರ್ತವ್ಯಗಳನ್ನು ಪಾಲಿಸುವ ಮೂಲಕ ಸಜ್ಜನ ನಾಗರಿಕರಾಗಿ ರೂಪುಗೊಳ್ಳಬೇಕೆಂದು ಪ್ರಾಂಶುಪಾಲರು ಕರೆ ನೀಡಿದರು.
ಆಂಗ್ಲ ಭಾಷಾ ಉಪನ್ಯಾಸಕ ರಂಗಸ್ವಾಮಿ ರವರು ಸಂವಿಧಾನ, ಪ್ರಜಾಪ್ರಭುತ್ವ, ಮತದಾನದ ಹಕ್ಕು, ಸಾಮಾಜಿಕ ನ್ಯಾಯ ಹಾಗೂ ಯುವಕರ ಪಾತ್ರ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ರಚನೆಯಲ್ಲಿ ನೀಡಿದ ಕೊಡುಗೆಯನ್ನು ವಿಶೇಷವಾಗಿ ಸ್ಮರಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ ಎಸ್ ರಾಮಪ್ರಸಾದ್ ಅವರು ದೇಶಸೇವೆ, ಶಿಸ್ತು, ಸಾಮಾಜಿಕ ಜವಾಬ್ದಾರಿ,
ಸ್ವಚ್ಛ ಭಾರತ, ಮತದಾನದ ಮಹತ್ವ ಹಾಗೂ ಸಾರ್ವಜನಿಕ ಆಸ್ತಿ ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿಯನ್ನು ಮತ್ತಷ್ಟು ಬಲಪಡಿಸಲು ಸಾದ್ಯ ಎಂದು ಹೇಳಿದರು.
ಪದ್ಮಾವತಿ ಅವರು ಪ್ರಾರ್ಥನೆ, ಲಿಂಗಣ್ಣಸ್ವಾಮಿ ಸ್ವಾಗತಿಸಿ ಕಾರ್ಯಕ್ರಮವನ್ನು ಪ್ರಕಾಶ್ ಅವರು ನಿರೂಪಿಸಿದರು.
ಆದಿಲ್ ಹುಸೇನ್ ದೇಶಭಕ್ತಿ ಗೀತೆಯನ್ನು ಹಾಡಿದರು. ಕಾಲೇಜಿನ ಎಲ್ಲಾ ಬೋದಕ ಮತ್ತು ಬೋದಕೇತರ ವರ್ಗದವರು ಉಪಸ್ಥಿತರಿದ್ದರು.
