ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ನೀಡಬೇಕೆಂದು ಆಮ್ ಆದ್ಮಿ ಪಕ್ಷದ ಯುವ ಘಟಕ ಆಗ್ರಹಿಸಿತು.
ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಹನುಮಾಪುರ ಮಾತನಾಡಿ,ನಮ್ಮ ಮೆಟ್ರೊದಲ್ಲಿ ಈಗಾಗಲೇ ಅತಿ ಹೆಚ್ಚು ಬೆಲೆ ಏರಿಕೆಯಾಗಿದ್ದು ನಗರದಲ್ಲಿ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮೆಟ್ರೋ ಸಂಚಾರವು ಅತ್ಯಂತ ದುಬಾರಿಯಾಗಿದೆ ಎಂದು ವಿಷಾದಿಸಿದರು.
ಸಾಕಷ್ಟು ವಿದ್ಯಾರ್ಥಿಗಳು ಅತಿಯಾದ ಬೆಲೆಯಿಂದಾಗಿ ಮೆಟ್ರೋದಲ್ಲಿ ಸಂಚರಿಸಲು ಆಗುತ್ತಿಲ್ಲ. ಬೆಂಗಳೂರಿನ ಸಂಚಾರದ ಒತ್ತಡದಿಂದಾಗಿ ಬಸ್ ಗಳಲ್ಲಿಯೇ ವಿದ್ಯಾರ್ಥಿಗಳು ಸಂಚರಿಸುವುದರಿಂದಾಗಿ ಸಾಕಷ್ಟು ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಗಮನ ಸೆಳೆದರು.
ಬೆಂಗಳೂರಿನ ಜನನಿಬಿಡ ಸಂಚಾರದ ಒತ್ತಡದಿಂದಾಗಿ ಸಮಯಕ್ಕೆ ಸರಿಯಾಗಿ ಶಾಲಾ, ಕಾಲೇಜುಗಳಿಗೆ ತಲುಪಲಾಗದೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದ್ದಾರೆ.
ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯ ಸರ್ಕಾರ ಕೂಡಲೇ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗಾಗಿ ರಿಯಾಯಿತಿ ದರದಲ್ಲಿ ಪಾಸ್ ಗಳನ್ನು ನೀಡಬೇಕು ಹಾಗೂ ವಿದ್ಯಾರ್ಥಿಗಳ ನೆರವಿಗೆ ಧಾವಿಸಬೇಕು ಎಂದು ಲೋಹಿತ್ ಹನುಮಾಪುರ ಒತ್ತಾಯಿಸಿದರು.
ಬೆಂಗಳೂರು ನಗರ ಯುವ ಘಟಕದ ಅಧ್ಯಕ್ಷ ಓಂಕಾರ್ ಮಂಜುನಾಥ್ ಮಾತನಾಡಿ, ನಮ್ಮ ತಂಡವು ಬೆಂಗಳೂರಿನ ಎಲ್ಲಾ ಕಾಲೇಜುಗಳ ಬಳಿ ತೆರಳಿ ಕನಿಷ್ಠ 1 ಲಕ್ಷ ವಿದ್ಯಾರ್ಥಿಗಳ ಬಳಿ ಈ ಬಗ್ಗೆ ಸಹಿಸಂಗ್ರಹಣೆ ಮಾಡುತ್ತೇವೆ, ಈಗಾಗಲೇ ಈ ಬಗ್ಗೆ ಎಲ್ಲಾ ರೂಪುರೇಷೆಗಳನ್ನು ತಯಾರು ಮಾಡಲಾಗಿದೆ
ಎಂದು ತಿಳಿಸಿದರು.
ಜನವರಿ 7 ರಂದು ನಗರದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಬೆಳಗ್ಗೆ 10 ಗಂಟೆಗೆ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹಾಗೂ ಪಕ್ಷದ ಇನ್ನಿತರ ಹಿರಿಯ ನಾಯಕರುಗಳ ನೇತೃತ್ವದಲ್ಲಿ 1 ಲಕ್ಷ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ನಗರದ ಎಲ್ಲಾ ವಿದ್ಯಾರ್ಥಿಗಳು ಪಕ್ಷದ ಈ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯ ಪಡಿಸಬೇಕು ಎಂದು ಕರೆ ನೀಡಿದರು .
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಖಜಾಂಚಿ ಪ್ರಕಾಶ್ ನಡಂಗಡಿ, ಯುವ ಘಟಕದ ಉಮೇಶ್ ಗೌಡ ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
