(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕೊಳ್ಳೇಗಾಲ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವಿಭಾಗಿಯ ಕಚೇರಿಯಲ್ಲಿ ಹಣವಂತ ಪ್ರಭಾವಿ ಗುತ್ತಿಗೆದಾರರನ್ನು ಪರಿಗಣಿಸುವ ಅಧಿಕಾರಿಗಳು ಸಣ್ಣಪುಟ್ಟ ಗುತ್ತಿಗೆದಾರರನ್ನು ನಿರ್ಲಕ್ಷ್ಯಿಸುತ್ತಿದ್ದಾರೆ.
ಕಚೇರಿಯಲ್ಲಿ ಸಿಬ್ಬಂದಿ ಹಾಗೂ ನೌಕರರು ಸಾಮಾನ್ಯ ಗುತ್ತಿಗೆದಾರರೊಡನೆ ತುಚ್ಚವಾಗಿ ನಡೆದುಕೊಳ್ಳುತ್ತಾರೆ.ಇಂತವರಿಗೆ ಕಡಿವಾಣ ಹಾಕಿ ತಿಳಿ ಹೇಳಬೇಕಾದ ಹಿರಿಯ ಅಧಿಕಾರಿಗಳೇ ಬೆಂಬಲಕ್ಕೆ ನಿಂತಿದ್ದಾರೆ ಎಂದು ಸ್ಥಳೀಯ ಗುತ್ತಿಗೆದಾರರು ಗಂಭೀರ ಆರೋಪ ಮಾಡಿದ್ದಾರೆ.
ಇದಕ್ಕೆ ಪೂರಕವಾಗಿ ಇಲ್ಲಿನ ಚೆಸ್ಕಾಂ ಕಚೇರಿಯಲ್ಲಿ ಗುತ್ತಿಗೆದಾರರ ಜೊತೆ ಇಲ್ಲಿನ ಸಿಬ್ಬಂದಿಗಳ ನಡವಳಿಕೆ ಹಾಗೂ ಹಿರಿಯ ಅಧಿಕಾರಿಗಳ ಸಮರ್ಥನೆ ಸಾಕ್ಷಿಯಾಗಿದೆ.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಚೆಸ್ಕಾಂ ಕೊಳ್ಳೇಗಾಲಕ್ಕೆ 2.5 ಕೋಟಿ ರೂ. ಅನುದಾನ ಬಿಡುಗಡೆಯಾಗಿರುವ ಬಗ್ಗೆ ಸ್ಥಳೀಯ ಗುತ್ತಿಗೆದಾರರಿಗೆ ಮಾಹಿತಿಯಿದ್ದ ಹಿನ್ನೆಲೆಯಲ್ಲಿ ರಾಜ್ಯ ವಿದ್ಯುತ್ ಗುತ್ತಿಗೆದಾರ ಸಂಘದ ನಿರ್ದೇಶಕರಾದ ತಸ್ಕಿನ್ ಅಹಮದ್ ಅವರು ಶನಿವಾರ ಬೆಳಿಗ್ಗೆ ಇಲ್ಲಿನ ಚೆಸ್ಕಾಂ ಕಚೇರಿಗೆ ತೆರಳಿ ಕಚೇರಿಯ ವಿಷಯ ನಿರ್ವಾಹಕರಾದ ಮಧುಸೂದನ್ ಅವರ ಬಳಿ ವಿಚಾರಿಸಲು ಹೋಗಿದ್ದಾರೆ.
ಎಷ್ಟು ಅನುದಾನ ಬಂದಿದೆ ಬಂದಿರುವ ಅನುದಾನವನ್ನು ಯಾವ ಯಾವ ಕಾಮಗಾರಿಗೆ ಎಷ್ಟೆಷ್ಟು ಅನುದಾನ ಬಳಕೆ ಯಾಗಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ತಿಳಿಯಲು ಮುಂದಾಗಿದ್ದಾರೆ. ಈ ವೇಳೆ ಮಧುಸೂದನ್ ಅವರು ನನ್ನನ್ನೇಕೆ ಕೇಳುತ್ತೀರಾ ನನಗೆ ಏನು ಗೊತ್ತಿಲ್ಲ ಎಂದು ಉಡಾಫೆ ಮಾತನಾಡಿದರೆಂದು ಆರೋಪಿಸಿದ್ದಾರೆ.
ಈ ವಿಚಾರವನ್ನು ಸ್ಥಳೀಯ ಗುತ್ತಿಗೆದಾರರಾದ ತಾಲ್ಲೂಕು ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆ ಬಿ ನಾಗರಾಜು, ಕಾರ್ಯದರ್ಶಿ ಸಂತೋಷ್ ಕುಮಾರ್, ಪ ಜಾತಿ/ ಪ ವರ್ಗದ ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷ ನಾಗರಾಜು, ಹಿರಿಯ ಗುತ್ತಿಗೆದಾರರಾದ ಮಜರ್ ಉದ್ದೀನ್, ರಿಯಾಜ್ ಸೇರಿದಂತೆ ಇನ್ನಿತರರಿಗೆ ರಾಜ್ಯ ವಿದ್ಯುತ್ ಗುತ್ತಿಗೆದಾರ ಸಂಘದ ನಿರ್ದೇಶಕರಾದ ತಸ್ಕಿನ್ ಅಹಮದ್ ರವರು ತಿಳಿಸಿದ್ದಾರೆ.
ಇದರಿಂದ ಅಸಮಾಧಾನಗೊಂಡ ಗುತ್ತಿಗೆದಾರರು ಕೂಡಲೇ ಕಾರ್ಯಪಾಲಕ ಅಭಿಯಂತರರ ಕೊಠಡಿಗೆ ತೆರಳಿ ಕಾರ್ಯಪಾಲಕ ಅಭಿಯಂತರರಾದ ತಬಾಸುಂ ಅಬ್ಜಾ ಅವರ ಮುಂದೆ ಈ ನೌಕರನ ನಡವಳಿಕೆಯನ್ನು ಖಂಡಿಸಿದ್ದಾರೆ.
ಕಚೇರಿಗೆ ಬರುವ ಸಾರ್ವಜನಿಕರು, ಗುತ್ತಿಗೆದಾರರ ಜೊತೆ ಸೌಜನ್ಯವಾಗಿ ಮಾತನಾಡುವಂತೆ ನಿಮ್ಮ ಕಚೇರಿಯ ಸಿಬ್ಬಂದಿಗಳಿಗೆ ತಿಳಿಹೇಳಿ ಎಂದಿದ್ದಾರೆ.
ಆದರೆ ತಬಸುಂ ಅಬ್ಜಾ ಅವರು ತಮ್ಮ ಕಚೇರಿಯ ನೌಕರರಿಗೆ ಬುದ್ಧಿ ಹೇಳುವ ಬದಲು ತಮ್ಮ ಕಚೇರಿಯ ವಿಷಯ ನಿರ್ವಾಹಕ ಮಧುಸೂದನ್ ಅವರು ಅಧಿಕೃತವಾಗಿ ಮಾಹಿತಿ ನೀಡಲು ಬರುವುದಿಲ್ಲ ಎಂದು ಹೇಳುವ ಮೂಲಕ ಅವರ ನಡೆಯನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ.
ಕಾರ್ಯಪಾಲಕ ಅಭಿಯಂತರರ ಸಮರ್ಥನೆಯಿಂದ ಈ ಗುತ್ತಿಗೆದಾರರು ಮತ್ತಷ್ಟು ಬೇಸರಗೊಂಡಿದ್ದಾರೆ.
ಈ ವೇಳೆ ತಸ್ಕಿನ್ ಅಹಮದ್ ಅವರು ಮಧುಸೂದನ್ ವರ್ಗಾವಣೆಯಾಗಿ ಇಷ್ಟು ದಿನಗಳಾದರೂ ಏಕೆ ಇನ್ನೂ ಕಚೇರಿಯಲ್ಲಿ ಇಟ್ಟುಕೊಂಡಿದ್ದೀರಾ? ನಿಮ್ಮ ಈ ನಡೆಗೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ಈ ಕಛೇರಿಯಲ್ಲಿ ಬಡವರು, ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ನಿಮ್ಮ ನೌಕರರು ಸಾರ್ವಜನಿಕರ ಕೆಲಸ ಮಾಡಲು ಬಂದಿದ್ದಾರೆಯೇ ಅಥವಾ ಪ್ರಭಾವಿ ಗುತ್ತಿಗೆದಾರರನ್ನು ಬೆಳೆಸಲು ಬಂದಿದ್ದಾರೆಯೇ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ನೌಕರರಾದ ಮ್ಯಾಕಾನಿಕ್ ವಿಭಾಗದ ರೇವಣ್ಣ ಹಾಗೂ ಲೆಕ್ಕಶಾಖೆಯ ನಂಜುಂಡೇಗೌಡರವರು ಕಾರ್ಯಪಾಲಕ ಅಭಿಯಂತರರಾದ ತಬಾಸುಂ ಅಬ್ಜಾ ಅವರ ಮುಂದೆ ಯೇ ತಸ್ಕಿನ್ ಅಹಮದ್ ಅವರ ಜೊತೆ ಏರುಧ್ವನಿಯಲ್ಲಿ ವಾಗ್ವಾದಕ್ಕಿಳಿದು ಕಚೇರಿಯಲ್ಲಿ ಕೆಲಕಾಲ ಗದ್ದಲಕ್ಕೆ ಕಾರಣರಾದರು.
ಇದರಿಂದ ಕೆರಳಿದ ತಸ್ಕಿನ್ ಅಹಮದ್ ಈ ಕಚೇರಿಯಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಅಲ್ಲೇ ಧರಣಿ ಕೂರುವುದಾಗಿ ಎಚ್ಚರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಸ್ಕಿನ್ ಅಹಮದ್ ಅವರು ವಿದ್ಯುತ್ ಸಂಪರ್ಕ, ಹೊಸ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕ
ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಚೆಸ್ಕಾಂಗೆ 2.5 ಕೋಟಿ ರೂ. ಅನುದಾನ ಬಿಡುಗಡೆಯಾಗಿರುವ ಬಗ್ಗೆ ನಮಗೆ ಮಾಹಿತಿ ಇತ್ತು.ಹಾಗಾಗಿ ಇಲ್ಲಿನ ಚೆಸ್ಕಾಂ ಕಚೇರಿಗೆ ತೆರಳಿ ಕಚೇರಿಯ ವಿಷಯ ನಿರ್ವಾಹಕರಾದ ಮಧುಸೂದನ್ ಅವರ ಬಳಿ ಎಷ್ಟು ಅನುದಾನ ಬಂದಿದೆ ಬಂದಿರುವ ಅನುದಾನವನ್ನು ಯಾವ ಯಾವ ಕಾಮಗಾರಿಗೆ ಎಷ್ಟೆಷ್ಟು ಅನುದಾನ ಬಳಸಿದ್ದೀರಾ ಎಂದು ವಿಚಾರಿಸಲು ಹೋದರೆ ಮಧುಸೂದನ್ ಅವರು ನನ್ನನ್ನೇಕೆ ಕೇಳುತ್ತೀರಾ? ನನಗೆ ಏನು ಗೊತ್ತಿಲ್ಲ, ನನ್ನನ್ನು ಕೇಳಲೇಬೇಡಿ ಎಂದು ಉಡಾಫೆಯಾಗಿ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವ್ಯಕ್ತಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಚಮಚಗಿರಿ ಮಾಡುವ ಕೆಲಸ ಮಾಡುತ್ತಿದ್ದಾರೆ ಇವರಿಗೆ ಕಳೆದ ಆರು ತಿಂಗಳ ಹಿಂದೆ ಮೈಸೂರಿನ ಕೆಪಿಟಿಸಿಎಲ್ ಕಚೇರಿಗೆ ವರ್ಗವಾಗಿತ್ತು. ಈ ವೇಳೆ ನಾನು ಕೊಳ್ಳೇಗಾಲದಲ್ಲಿ ಇರುವುದಿಲ್ಲ ಎಂದು ಬರೆದು ಕೊಟ್ಟಿದ್ದರು ಆದರೆ ತಬಾಸುಂ ಅಬ್ಜಾ ಅವರು ಇಲ್ಲಿಗೆ ಕಾರ್ಯಪಾಲಕ ಅಭಿಯಂತರರಾಗಿ ಬಂದ ನಂತರ ಇಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ದೂರಿದರು.
ಈಗ ಸರ್ಕಾರದಿಂದ ಬಂದಿರುವ ಅನುದಾನದಲ್ಲಿ ಪ್ರತಿಯೊಬ್ಬರಿಗೂ 5 ಲಕ್ಷ ರೂ. ಕಾಮಗಾರಿ ನೀಡ ಬೇಕೆಂಬ ಸರ್ಕಾರದ ಆದೇಶವಿದೆ ಆದರೆ ಕಾಮಗಾರಿಗಳನ್ನು ತಮಗೆ ಬೇಕಾಗಿರುವ ಹಣವಂತ ಗುತ್ತಿಗೆದಾರರಿಗೆ ನೀಡಿ ಖುಷಿಪಟ್ಟಿದ್ದಾರೆ.
ಆದರೆ ಇಲ್ಲಿರುವ ಸ್ಥಳೀಯ ಸಣ್ಣಪುಟ್ಟ ಗುತ್ತಿಗೆದಾರರಿಗೆ ಅನ್ಯಾಯ ಎಸಗಿದ್ದಾರೆ.
ಇಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು ಹೆಚ್ಚು ಜನರಿದ್ದಾರೆ ನಮಗೆ ಆದ್ಯತೆ ನೀಡಿ ಎಂದು ಕೇಳುತ್ತಿದ್ದೇವೆ ಆದರೆ ನೀಡುತ್ತಿಲ್ಲ. ಹಣವಂತ ಗುತ್ತಿಗೆದಾರರಿಗೂ ಇವರಿಗೂ ಏನು ಒಡಂಬಡಿಕೆ ಯಾಗಿದೆಯೋ ಎನೋ ಗೊತ್ತಿಲ್ಲ. ಆದರೆ ಅವರಿಗೇನೇ ಇವರು ಕಾಮಗಾರಿ ನೀಡುವುದು
ಎಂದು ತಸ್ಕಿನ್ ಅಹಮದ್
ಗಂಭೀರ ಆರೋಪ ಮಾಡಿದರು.
