ಮೈಸೂರು: ಯೋಗ ದೇಹದ ಆರೋಗ್ಯಕ್ಕೆ ಸಂಗೀತ ಮನಸಿನ ಆರೋಗ್ಯಕ್ಕೆ
ಚೈತನ್ಯ ನೀಡುತ್ತವೆ ಎಂದು ಸಂಗೀತ ವಿದುಷಿ ಅನಸೂಯ ಸುದರ್ಶನ್ ತಿಳಿಸಿದರು.

ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ
ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಸಂಗೀತದಿಂದ ಆರೋಗ್ಯ ವಿಚಾರಮಂಥನ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಸಂಗೀತ ಸ್ಪರ್ಧೆ ವೇಳೆ ಬಹುಮಾನ, ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಯೋಗ ಮತ್ತು ಸಂಗೀತ ಅಭ್ಯಾಸ ಮನುಷ್ಯನ ವಿಕಾಸ ಬಯಸುವಂತವು.ಇವುಗಳ ಅಭ್ಯಾಸದ ಮೂಲಕ ದೈನಂದಿನ ಜೀವನದ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಂಗೀತಕ್ಕಿರುವ ಅಗಾಧ ವ್ಯಾಪ್ತಿ ಮತ್ತು ಪ್ರಭಾವಗಳ ಹಿನ್ನೆಲೆಯಲ್ಲಿ ಸರ್ಕಾರ ವಿಶ್ವ ಸಂಗೀತ ದಿನಾಚರಣೆಯನ್ನು ಕೂಡ ಆಚರಿಸಬೇಕು,ಆ ಮೂಲಕ ಯುವಕರಲ್ಲಿ ಸಾಂಸ್ಕೃತಿಕ ಅಭಿರುಚಿಗೆ ಒತ್ತಾಸೆಯಾಗಿ ನಿಲ್ಲಬೇಕು ಎಂದು ಅನಸೂಯ ಮನವಿ ಮಾಡಿದರು.

ನೂರಕ್ಕೂ ಹೆಚ್ಚು ಮಕ್ಕಳು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ಅನುಷಾ, ಅನನ್ಯ, ಗಾಯಿತ್ರಿ, ವಿಶಾಲ್, ಶಿವಯ್ಯ ಅವರಿಗೆ ಬಹುಮಾನ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಗೀತ ವಿದುಷಿ ಶ್ರೀವಾಣಿ, ವಿದುಷಿ ರಾಧಾ ನಾಗರಾಜ್, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ಶಾಲೆಯ ಮುಖ್ಯ ಶಿಕ್ಷಕರಾದ ಸುಗುಣಾವತಿ, ಸಮಾಜ ಸೇವಕರಾದ ಸರಸ್ವತಿ ಹಲಸಗಿ, ಸುಶೀಲ, ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಶೀಲ ರಾವ್, ಸಮಾಜ ಸೇವಕಿ ಕೋಮಲ, ಸಂಗೀತ ಶಿಕ್ಷಕಿ ಶ್ರಾವ್ಯ, ರೂಪದರ್ಶಿ ಶೋಭಾ, ಸಂಗೀತ ಶಿಕ್ಷಕಿ ಶಾರದಾ ಹಾಗೂ ಶಾಲೆಯ ಶಿಕ್ಷಕ ವೃಂದ ಹಾಜರಿದ್ದರು.
