ಕೊಪ್ಪಳ: ರಾಜ್ಯದ ಆಟೋ ಚಾಲಕರಿಗೆ ರಾಜ್ಯ ಸರ್ಕಾರವು 6ನೇ ಗ್ಯಾರಂಟಿಯನ್ನು ಘೋಷಣೆ ಮಾಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಸಿಂಧನೂರಿನ ಹೊಸಹಳ್ಳಿ ಇ.ಜೆ. ಕ್ಯಾಂಪಿನಲ್ಲಿರುವ ಶ್ರೀಕೃಷ್ಣದೇವರಾಯ ವಿದ್ಯಾಸಂಸ್ಥೆಗೆ ಮಂಜೂರಾಗಿರುವ ಸೈನಿಕ ಶಾಲೆಯ ಉದ್ಘಾಟನೆಗೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಕೆಲ ನಾಯಕರು ಕೇಂದ್ರ ಸರ್ಕಾರದ ಮೇಲೆ ಟೀಕೆ ಮಾಡುತ್ತಿದ್ದಾರೆ. ಅದರ ಸಮಾನಂತರವಾಗಿ ಆಟೋ ಚಾಲಕರು ಬಳಸುವ ಇಂಧನದ ಮೇಲೆ ತೆರಿಗೆಯನ್ನು ಈ ಸರ್ಕಾರ ವಿಧಿಸಿದೆ. ಹಾಗಾಗಿ ಆ ತೆರಿಗೆಯನ್ನು ವಾಪಸ್ ಪಡೆಯಬೇಕು ಹಾಗೂ ಈಗಾಗಲೇ ಐದು ಗ್ಯಾರಂಟಿಗಳನ್ನು ಕೊಟ್ಟ ಹಾಗೆ ಆಟೋ ಚಾಲಕರಿಗೆ 6ನೇ ಗ್ಯಾರಂಟಿಯನ್ನು ಕೊಡಬೇಕು ಎಂದು ಒತ್ತಾಯಿಸಿದರು.
ಜಗತ್ತಿನಲ್ಲಿ ಯುದ್ಧ ಸನ್ನಿವೇಶ ಸೃಷ್ಟಿಯಾಗಿ ಸಂಕಷ್ಟ ಪರಿಸ್ಥಿತಿ ಉಂಟಾಗಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ಕೇಂದ್ರ ಸರ್ಕಾರವು ನಿಭಾಯಿಸುತ್ತಿದೆ. ಆದರೆ ಬಿಕ್ಕಟ್ಟು ಪರಿಸ್ಥಿತಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿದ್ದರಾಮಯ್ಯನವರು ವಿಫಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೆಚ್ ಡಿ ಕೆ ಟೀಕಾಪ್ರಹಾರ ನಡೆಸಿದರು.
ಈ ಪರಿಸ್ಥಿತಿ ಸರಿ ಹೋಗುವವರೆಗೆ ಮಾಸಿಕ 15,000 ಗ್ಯಾರಂಟಿ ಕೊಡಿ ಎಂದು ಆಟೋ ಚಾಲಕರು ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಭಾಗ್ಯಗಳನ್ನು ನೀಡಿರುವ ಆಟೋ ಚಾಲಕರಿಗೆ ಮತ್ತೊಂದು ಗ್ಯಾರಂಟಿಯನ್ನು ಕೊಡಲಿ ಎಂದು ಹೇಳಿದರು.
ಯುದ್ದದ ಸಂಧಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಏನು ಮಾಡುತ್ತಿತ್ತು, ಅವರೇನು ಎಲ್ಲವನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದರಾ ಅನಗತ್ಯವಾಗಿ ಟೀಕೆ ಮಾಡುವುದು ಸರಿಯಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
