ಯಳಂದೂರು: ಯಳಂದೂರು ತಾಲೂಕು ಆಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಈ ಬಾರಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ.
ಈ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿ ವರ್ಗವು ತಮಗೆ ನೀಡಿರುವ ಜವಾಬ್ದಾರಿಗಳನ್ನು ಪ್ರಮಾಣಿಕವಾಗಿ ನಿರ್ವಹಿಸಬೇಕೆಂದು ತಹಶೀಲ್ದಾರ್ ಎಸ್.ಎಲ್.ನಯನ ಸೂಚಿಸಿದರು.
ಅವರು ತಾಲೂಕು ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ತಾಲೂಕು ನಾಯಕ ಮಂಡಳಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆ 26 ರಂದು ಜಯಂತಿಯನ್ನು ಆಚರಣೆ ಮಾಡಲಾಗುವುದು. ಬೆಳಿಗ್ಗೆ 9 ಗಂಟೆಗೆ ಪಟ್ಟಣದ ಷಡಕ್ಷರ ದೇವರ ಗದ್ದುಗೆಯಿಂದ ವಿವಿಧ ಕಲಾತಂಡಗಳೊದಿಗೆ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಪಟ್ಟಣದ ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯದ ಬಳಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಅಂದು ಸರ್ಕಾರಿ ರಜೆಯಾಗಿದ್ದರೂ ಕೂಡ ಪ್ರತಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿ ವರ್ಗ ತಪ್ಪದೆ ಕಾರ್ಯಕ್ರಮ ಮುಗಿಯುವರೆಗೂ ಭಾಗವಹಿಸಬೇಕು. ಯಾರಾದರೂ ಈ ಬಗ್ಗೆ ನಿರ್ಲಕ್ಷ ವಹಿಸಿದರೆ ಅಂತಹವರಿಗೆ ನೋಟೀಸ್ ನೀಡಿ ಸೂಕ್ತ ಕ್ರಮ ವಹಿಸಲಾಗುವುದು. ತಮ್ಮ ಇಲಾಖೆಗೆ ನೀಡಿರುವ ಜವಾಬ್ದಾರಿಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು ಎಂದು ಸೂಚನೆ ನೀಡಿದರು
ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎ.ಬಿ. ವೇಣು, ಪಪಂ ಮುಖ್ಯಾಧಿಕಾರಿ ಎಂ.ಪಿ. ಮಹೇಶ್ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಕೇಶವಮೂರ್ತಿ, ಎಇಇ ಚಂದ್ರಶೇಖರಮೂರ್ತಿ, ತಾಲೂಕು ನಾಯಕ ಮಂಡಳಿ ಅಧ್ಯಕ್ಷ ವೈ.ಎನ್. ಮುರುಳಿಕೃಷ್ಣ, ಪಪಂ ಮಾಜಿ ಸದಸ್ಯರಾದ ಮಹೇಶ್, ವೈ.ವಿ. ಉಮಾಶಂಕರ ಸೇರಿದಂತೆ ನಾಯಕ ಜನಾಂಗದ ಮುಖಂಡರು,ಸ್ಥಳೀಯರು ಉಪಸ್ಥಿತರಿದ್ದರು.
