ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡ ಹಿನ್ನೆಲೆಯಲ್ಲಿ, ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ದಸರಾ ಗಜಪಡೆಗೆ ಇಂದು ಆತ್ಮೀಯವಾಗಿ ಬೀಳ್ಕೊಡಲಾಯಿತು.
ದಸರಾ ಉತ್ಸವ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿದ ಗಜಪಡೆಯ ಆನೆಗಳಿಗೆ ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಜಿಲ್ಲಾಡಳಿತದ ವತಿಯಿಂದ ವಿಶೇಷ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಸಮಾಜಸೇವಕರಾದ ಜ್ಯೋತಿ ಹಾಗೂ ಅವರ ಸ್ನೇಹಿತರು ತಮ್ಮ ನೆಚ್ಚಿನ ಆನೆಗಳ ಕಾವಾಡಿ ಮತ್ತು ಮಾವುತ ಕುಟುಂಬಗಳೊಂದಿಗೆ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡರು. ಅಲ್ಲದೆ, ಅವರಿಗಾಗಿ ಚಿಕನ್ ಚಾಪ್ಸ್, ಗೀ ರೈಸ್ ಹಾಗೂ ಮೊಟ್ಟೆಯ ಊಟವನ್ನು ವಿತರಿಸಿ ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು.
ದಸರಾ ಉತ್ಸವದ ಯಶಸ್ಸಿಗೆ ಶ್ರಮಿಸಿದ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬಗಳ ಸೇವೆಯನ್ನು ಸ್ಮರಿಸಿದ ಸಮಾಜಸೇವಕರು, ಅವರಿಗೆ ಊಟ ವಿತರಿಸುವ ಮೂಲಕ ಕೃತಜ್ಞತೆ ಸಲ್ಲಿಸಿ ಆತ್ಮೀಯವಾಗಿ ಬಿಳ್ಕೊಡುಗೆ ನೀಡಿದರು.
