ಮೈಸೂರು: ಮೈಸೂರು ದಸರಾ ಮಹೋತ್ಸವದ ಯಶಸ್ಸಿನ ಹಿನ್ನೆಲೆಯಲ್ಲಿ, ಚಿನ್ನದ ಅಂಬಾರಿ ಆನೆ ಖ್ಯಾತಿಯ ಅಭಿಮನ್ಯುವಿಗೆ ಕಂಚಿನ ಗಂಟೆಯನ್ನು ಕೊಡುಗೆಯಾಗಿ ನೀಡಿ ಗೌರವಿಸಲಾಯಿತು.
ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕನ್ನಡ ಯೋಧ ದಿವಂಗತ ನ. ನಾಗಲಿಂಗಸ್ವಾಮಿ ಅವರ ಕುಟುಂಬದ ವತಿಯಿಂದ ಈ ವಿಶೇಷ ಕಂಚಿನ ಗಂಟೆಯನ್ನು ನೀಡಲಾಗಿದೆ.
ಖ್ಯಾತ ಶಿಲ್ಪಿ ರಾಜೇಶ್ ಅವರು ಕಲಾತ್ಮಕವಾಗಿ ವಿನ್ಯಾಸಗೊಳಿಸಿರುವ ಈ ಗಂಟೆಯನ್ನು, ಅರಮನೆ ಆವರಣದಲ್ಲಿ ಅಭಿಮನ್ಯು ಆನೆಯ ಮಾವುತರಾದ ವಸಂತ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಈ ಕಂಚಿನ ಗಂಟೆಗೆ ಸಹಜ ಕಲಾಕೃತಿಗಳನ್ನು ಕೆತ್ತಲಾಗಿದೆ ಮತ್ತು ಗಂಟೆಯ ನಾದವು ಅತ್ಯಂತ ಮಧುರ ಹಾಗೂ ಗಂಭೀರವಾಗಿದೆ.
ಸತತ ಆರು ವರ್ಷಗಳ ಕಾಲ (2020 ರಿಂದ 2025ರವರೆಗೆ) ಯಶಸ್ವಿಯಾಗಿ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಂಗತ್ಯ ಉಂಟುಮಾಡಿದ ಅಭಿಮನ್ಯುವಿನ ಅಪ್ರತಿಮ ಸೇವೆಗೆ ಕೃತಜ್ಞತೆಯಾಗಿ ಈ ಗೌರವ ಸಲ್ಲಿಸಲಾಗಿದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ,
60 ವರ್ಷ ತುಂಬಿದ ಕಾರಣಕ್ಕೆ ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿ ಹೊಂದಿದ್ದರೂ, ಸಾರ್ವಜನಿಕರ ಹಾಗೂ ಅಭಿಮಾನಿಗಳ ಅಪಾರ ಒತ್ತಾಯದ ಮೇರೆಗೆ ಅಭಿಮನ್ಯುವನ್ನು ಈ ಬಾರಿಯ ದಸರಾದಲ್ಲಿ ನಿಶಾನೆ ಆನೆಯಾಗಿ ಪಾಲ್ಗೊಳ್ಳಲು ವಿಶೇಷವಾಗಿ ಕರೆತರಲಾಗಿತ್ತು.
ಈ ಅಪರೂಪದ ಗಂಟೆಯನ್ನು ಮಾವುತ ವಸಂತ ಹಾಗೂ ಕಾವಾಡಿಗರು ಸ್ವೀಕರಿಸುವಾಗ ಇಡೀ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ದಸರಾ ಆನೆಗಳ ಅಭಿಮಾನಿಗಳು ಮತ್ತು ಕ್ರೀಡಾ ಪಟು ಪೃಥ್ವಿ ಶೆಟ್ಟಿ ಮತ್ತು ಸ್ನೇಹಿತರು ಉಪಸ್ಥಿತರಿದ್ದು ಸಂಭ್ರಮಿಸಿದರು.
ಮುಂದಿನ ದಿನಗಳಲ್ಲಿ ಅಭಿಮನ್ಯು ಹೆಜ್ಜೆ ಹಾಕುವಾಗ ಈ ಕಂಚಿನ ಗಂಟೆಯ ನಾದ ಅರಮನೆ ನಗರಿ ಹಾಗೂ ಕಾಡಿನ ಶಿಬಿರಗಳಲ್ಲಿ ಮೊಳಗಲಿದೆ.
