ಮೈಸೂರು: ಸಾರ್ವಜನಿಕರ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಸ್ವೀಕರಿಸುವುದು ಅದಕ್ಕೆ ಪರಿಹಾರ ಕೊಡುವುದು ನನ್ನ ಗುರಿ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗನಹಳ್ಳಿ ಮತ್ತಿತರೆಡೆ ಸಂಸದರು ಜನ ಸಂಪರ್ಕ ಸಭೆ ನಡೆಸಿದರು.
ಜನ ಸಂಪರ್ಕ ಸಭೆಗಳ ಮೂಲಕ ಜನರೊಂದಿಗೆ ನಂಟು ಬೆಳೆಯಲು ಅವರ ಸಮಸ್ಯೆಗಳನ್ನು ಖುದ್ದಾಗಿ ತಿಳಿಯಲು ಅನುಕೂಲವಾಗಲಿದೆ ಎಂದು ಹೇಳಿದರು.
ಪ್ರತಿ ಪಂಚಾಯತ್ಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದಲ್ಲದೆ ಅವುಗಳನ್ನು ತ್ವರಿತವಾಗಿ ಪರಿಹರಿಸಲು ಆದ್ಯತೆ ನೀಡುತ್ತೇವೆ. ರೈಲ್ವೆ, ರಸ್ತೆ, ಶಾಲಾ ಅಭಿವೃದ್ಧಿ ಮತ್ತು ಕೆಎಸ್ಆರ್ಟಿಸಿ ಬಸ್ ಸಮಸ್ಯೆಗಳ ಬಗ್ಗೆ ನನಗೆ ಹಲವಾರು ಅಹವಾಲುಗಳು ಸಲ್ಲಿಕೆಯಾಗಿದೆ. ಅದೆಲ್ಲವನ್ನು ಬಗೆಹರಿಸಲು ಮುಂದಾಗುತ್ತೇನೆ, ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಅಧಿಕಾರಿಗಳಿಗೆ ತಿಳಿಸಿ ಪರಿಹಾರ ದೊರಕಿಸಿಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.
ನಾಗರಿಕರು ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿದಾಗಲೂ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಗತ್ಯವಿದ್ದರೆ ನಾನೇ ಇಲಾಖೆ ಅಥವಾ ಕಚೇರಿಗಳಿಗೆ ಭೇಟಿ ನೀಡಿ ಫಾಲೋ ಅಪ್ ಮಾಡುತ್ತೇನೆ ಎಂದು ಯದುವೀರ್ ತಿಳಿಸಿದರು.
ಜನರಿಗಾಗಿ ನಮ್ಮ ಪ್ರಧಾನಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಜನರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದೆ, ಹಾಗಾಗಿ ಜನರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಈ ರೀತಿಯ ಜನಸಂಪರ್ಕ ಸಭೆಗಳನ್ನು ಹೆಚ್ಚಾಗಿ ಆಯೋಜಿಸಲಾಗುವುದು ಎಂದು ಯದುವೀರ್ ಒಡೆಯರ್ ಭರವಸೆ ನೀಡಿದರು.
ನಮ್ಮ ಸಂಸದರು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಜನರಿಂದ ಎಲ್ಲಾ ಅಹವಾಲು ಗಳನ್ನು ಸ್ವೀಕರಿಸುತ್ತಿರುವುದು ತುಂಬಾ ಸಂತೋಷ ತಂದಿದೆ. ನಮ್ಮ ಸಂಸದರು ಗ್ರಾಮದಲ್ಲಿ ಮತ್ತು ಇಡೀ ಕ್ಷೇತ್ರದಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಸದರು ನಮ್ಮ ಹೆಮ್ಮೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಿನೇಶ್ ತಮ್ಮ ಮನದಾಳದಿಂದ ನುಡಿದರು.
ಬಿಜೆಪಿ ನಗರಾಧ್ಯಕ್ಷ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ರಘು, ರುದ್ರಮೂರ್ತಿ, ಮಂಡಲ ಅಧ್ಯಕ್ಷರಾದ ಪೈಲ್ವಾನ್ ರವಿ, ವಸ್ತು ಪ್ರದರ್ಶನ ಪ್ರಾಧಿಕಾರ ಮಾಜಿ ಅಧ್ಯಕ್ಷ ಹೇಮಂತ್ ಗೌಡ ಸೇರಿದಂತೆ ಅಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು.
