ಬೆಳಗಾವಿ: ತೀವ್ರ ಅನಾರೋಗ್ಯ ದಿಂದ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡರೆ,ವಿಷಯ ತಿಳಿದು ದುಃಖ ಮತ್ತು ಆತುರದಲ್ಲಿ ಆಸ್ಪತ್ರೆಗೆ ಬರುತ್ತಿದ್ದ ಪತಿ ಅಪಘಾತದಲ್ಲಿ ಮೃತಪಟ್ಟ ಘೋರ ಘಟನೆಗಳು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ಮಧುರಾ ಕರೆಪ್ಪ (30) ಆತ್ಮಹತ್ಯೆಗೆ ಮಾಡಿಕೊಂ ಪತ್ನಿ, ಕರೆಪ್ಪ ಗಂಗಪ್ಪ ಮಾದರ (36) ಅಪಘಾತದಲ್ಲಿ ಮೃತಪಟ್ಟ ಪತಿ.
ಮಧುರಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.ಇದರಿಂದ ಮನನೊಂದು ವಿಷ ಸೇವಿಸಿದ್ದರು. ತಕ್ಷಣ ಮಧುರಾ ಅವರನ್ನು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೇ ಮಧುರಾ ಮೃತಪಟ್ಟಿದ್ದಾರೆ. ಪತ್ನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಸುದ್ದಿ ಕೇಳಿ ಪತಿ ಕರೆಪ್ಪ ದುಃಖ ಹಾಗೂ ತರಾತುರಿಯಲ್ಲಿ ಬೈಕ್ ನಲ್ಲಿ ಆಸ್ಪತ್ರೆಗೆ ಬರುತ್ತಿದ್ದರು. ಈ ವೇಳೆ ಅರವಳ್ಳಿ ಕ್ರಾಸ್ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಕರೆಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪತಿ,ಪತ್ನಿ ಇಬ್ಬರೂ ಮೃತಪಟ್ಟಿದ್ದು ಮೂವರು ಮಕ್ಕಳು ಅನಾತರಾದಂತಾಗಿದೆ.ಅವರ ದುಃಖದ ಕಟ್ಟೆ ಒಡೆದಿತ್ತು.ಇಡೀ ಊರಿನ ಜನ ಕಂಬನಿ ಮಿಡಿದಿದ್ದಾರೆ.
ಸ್ಥಳಕ್ಕೆ ಬೈಲಹೊಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡರು.
