ಮಧುರೈ: 2020ರಲ್ಲಿ ಇಡೀ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಸಾತಂಕುಲಂ ಲಾಕಪ್ ಡೆತ್ ಪ್ರಕರಣದಲ್ಲಿ ಮಧುರೈನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, 9 ಮಂದಿ ಪೊಲೀಸ್ ಸಿಬ್ಬಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಂಕುಲಂನಲ್ಲಿ ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿ ಮೊಬೈಲ್ ಅಂಗಡಿ ತೆರೆದ ಆರೋಪದ ಮೇಲೆ ತಂದೆ ಪಿ.ಜಯರಾಜ್ ಮತ್ತು ಮಗ ಜೆ.ಬೆನ್ನಿಕ್ಸ್ ಎಂಬವರ ಮೇಲೆ ಪೊಲೀಸರು ತೀವ್ರ ಹಲ್ಲೆ ನಡೆಸಿದ್ದರು.
ಪೊಲೀಸರ ದೌರ್ಜನ್ಯದಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಕೆಲವು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಸಾರ್ವಜನಿಕರನ್ನು ರಕ್ಷಿಸುವ ಜವಾಬ್ದಾರಿ ಹೊಂದಿರುವವರು ಸಮಾಜದ ಸಾಮೂಹಿಕ ಆತ್ಮಸಾಕ್ಷಿಯನ್ನೇ ಅಲುಗಾಡಿಸುವ ಅಪರಾಧ ಎಸಗಿದ್ದಾರೆ ಎಂದು ನ್ಯಾಯಾಧೀಶರಾದ ಜಿ.ಮುತ್ತುಕುಮಾರನ್ ಆತಂಕ ವ್ಯಕ್ತಪಡಿಸಿದ್ದಾರೆ.
ಶಿಕ್ಷೆಗೊಳಗಾದ ಅಪರಾಧಿಗಳಲ್ಲಿ ಮಾಜಿ ಇನ್ಸ್ಪೆಕ್ಟರ್ ಎಸ್.ಶ್ರೀಧರ್, ಮಾಜಿ ಸಬ್ ಇನ್ಸ್ಪೆಕ್ಟರ್ಗಳಾದ ಬಾಲಕೃಷ್ಣನ್ ಮತ್ತು ರಘು ಗಣೇಶ್ ಮತ್ತು ಹೆಡ್ ಕಾನ್ಸ್ಟೆಬಲ್ಗಳಾದ ಮುರುಗನ್ ಮತ್ತು ಸಾಮಿದುರೈ ಸೇರಿದ್ದಾರೆ.
ಮರಣದಂಡನೆಯ ಜೊತೆಗೆ ಅಪರಾಧಿಗಳಿಗೆ ಒಟ್ಟು 1.40 ಕೋಟಿ ರೂ.ನಷ್ಟು ಭಾರೀ ದಂಡ ಹಾಕಿದ್ದು, ಇದನ್ನು ನ್ಯಾಯಾಲಯ ಸಂತ್ರಸ್ತರ ಕುಟುಂಬಕ್ಕೆ ಪರಿಹಾರವಾಗಿ ನೀಡಿದೆ.
ಪೊಲೀಸರು ಜನಸಾಮಾನ್ಯರನ್ನು ರಕ್ಷಿಸಲು ಇರುವಂಥವರು. ಅವರೇ ಈ ರೀತಿಯ ಕ್ರೌರ್ಯದಲ್ಲಿ ಅಪರಾಧಿಗಳಾದಾಗ, ಕಾನೂನು ಅಂಥ ಕೃತ್ಯಗಳನ್ನು ತಡೆಗಟ್ಟಲೇಬೇಕು ಎಂದು ತೀರ್ಪಿನಲ್ಲಿ ನ್ಯಾಯಾಧೀಶರು ತಿಳಿಸಿದ್ದಾರೆ.
ತಂದೆ ಮತ್ತು ಮಗ ಇಬ್ಬರನ್ನೂ ಒಂದೇ ಬಾರಿಗೆ ಹತ್ಯೆ ಮಾಡುವ ಮೂಲಕ ಪೊಲೀಸರು ಒಂದು ಕುಟುಂಬದ ಅಡಿಪಾಯವನ್ನೇ ಕಿತ್ತು ಹಾಕಿದ್ದಾರೆ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಇಂತಹ ಭಯಾನಕ ಘಟನೆಗಳು ಎಂದಿಗೂ ಮರುಕಳಿಸಬಾರದು. ಹಾಗಾಗಿ, ಈ ರೀತಿಯ ದುಷ್ಕೃತ್ಯಗಳಿಗೆ ಶಿಕ್ಷೆ ಕೂಡಾ ಸಾಕಷ್ಟು ಕಠಿಣವಾಗಿರಬೇಕು ಎಂದು ನ್ಯಾಯಾಧೀಶರು ಒತ್ತಿ ಹೇಳಿದ್ದಾರೆ.
