ಮೈಸೂರು: ಕಾವೇರಿ ನೀರು ಹಂಚಿಕೆ ವಿಷಯವು ರಾಜಕೀಯ ದಾಳ ಅಥವಾ ಪ್ರಾದೇಶಿಕ ಸ್ಪರ್ಧೆಯಾಗಬಾರದು. ಇದು ನಮ್ಮ ದೇಶದ ಒಕ್ಕೂಟ ವ್ಯವಸ್ಥೆ ಮತ್ತು ಮಾನವ ಸಂವೇದನೆಯ ನಿಜವಾದ ಪರೀಕ್ಷೆಯಾಗಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ ಸುಬ್ರಹ್ಮಣ್ಯ ಹೇಳಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಸಾಮಾನ್ಯ ವರ್ಷಗಳಲ್ಲಿ ಅನ್ವಯವಾಗುವ ನಿಗದಿತ ನೀರಿನ ಪ್ರಮಾಣದ ಲೆಕ್ಕಾಚಾರವನ್ನು ಬರದ ವರ್ಷಗಳಲ್ಲೂ ಬಲವಂತವಾಗಿ ಹೇರುವುದು ಸಂಪೂರ್ಣ ಅಶಾಸ್ತ್ರೀಯ. ಮಳೆ ಕೊರತೆಯಾದಾಗ ಇರುವುದರಲ್ಲಿಯೇ ಸಂಕಷ್ಟವನ್ನು ಎರಡೂ ರಾಜ್ಯಗಳು ಸಮಾನವಾಗಿ ಹಂಚಿಕೊಳ್ಳುವ ವೈಜ್ಞಾನಿಕ ‘ಡಿಸ್ಟ್ರೆಸ್ ಫಾರ್ಮುಲಾ’ ಜಾರಿಯಾಗದಿರುವುದು ಕರ್ನಾಟಕಕ್ಕೆ ನಿರಂತರವಾಗಿ ಆಗುತ್ತಿರುವ ಬಹುದೊಡ್ಡ ಹಿನ್ನಡೆ ಹಾಗೂ ಅನ್ಯಾಯ ಎಂದು ರಂಜಿತಾ ಹೇಳಿದ್ದಾರೆ
ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನ್ಯಾಯಾಲಯದ ಮುಂದೆ ತಕ್ಷಣ ಸುಸ್ಥಿರ ಮತ್ತು ವೈಜ್ಞಾನಿಕ ‘ಸಂಕಷ್ಟ ಹಂಚಿಕೆ ಸೂತ್ರ’ವನ್ನು ರೂಪಿಸುವಂತೆ ಬಲವಾದ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ
ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಕಾವೇರಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬಾರದು ಮತ್ತು ರಾಜ್ಯದ ಕುಡಿಯುವ ನೀರಿನ ಅಗತ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕೆಂದು ರಂಜಿತಾ ಸುಬ್ರಹ್ಮಣ್ಯ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
