ಮೈಸೂರು: ಪ್ರಾಣಿ ಪಕ್ಷಿಗಳ ದಾಹ ನೀಗಿಸಲು ಎಲ್ಲರೂ ಮನೆಯ ಮುಂಭಾಗ ನೀರಿನ ತೊಟ್ಟಿ ಅಳವಡಿಸಬೇಕೆಂದು ಕೆಪಿಸಿಸಿ ಸದಸ್ಯರಾದ ನಜರ್ ಬಾದ್ ನಟರಾಜ್ ಮನವಿ ಮಾಡಿದರು.
ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ಹಮ್ಮಿಕೊಂಡಿರುವ ಮಾನವೀಯ ಸಮಾಜಮುಖಿ ಕಾರ್ಯವನ್ನು ಮೈಸೂರಿನ ಗಿರಿದರ್ಶಿನಿ ಬಡಾವಣೆಯ ತಮ್ಮ ನಿವಾಸದ ಮುಂಭಾಗ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನೀರಿನ ತೊಟ್ಟಿಯನ್ನು ಅಳವಡಿಸಿ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ದಿನೇ ದಿನೇ ರಾಜ್ಯ ಹಾಗೂ ಜಿಲ್ಲೆಯಾದ್ಯಂತ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು ತಿರುಗಾಡಲು ಸಹ ಕಷ್ಟವಾಗುತ್ತಿದೆ,ಇನ್ನು ಪ್ರಾಣಿ ಪಕ್ಷಿಗಳ ಪಾಡು ಹೇಳತೀರದು ಎಂದು ತಿಳಿಸಿದರು.
ಪುಟ್ಟ ಪ್ರಾಣಿ,ಪಕ್ಷಿಗಳ ಉಳಿವಿಗಾಗಿ ಹಾಗೂ ಅವುಗಳಿಗೆ ತೊಂದರೆಯಾಗದಂತೆ ಎಲ್ಲಾ ನಾಗರಿಕ ಬಂಧುಗಳು ಪ್ರಾಣಿ ಪಕ್ಷಿ ಪ್ರಿಯರು ತಮ್ಮ ಮನೆ, ಕಚೇರಿಗಳ ಮುಂಭಾಗ, ಉದ್ಯಾನವನಗಳಲ್ಲಿ ನೀರಿನ ತೊಟ್ಟಿ ಹಾಗೂ ತಮ್ಮಗಳ ಕೈಲಾದಷ್ಟು ಆಹಾರ ಇಡುವ ಮೂಲಕ ಪ್ರಾಣಿ ಪಕ್ಷಿಗಳ ಅನುಕೂಲತೆಗೆ ಸಹಕರಿಸಬೇಕು ಎಂದು ನಜಬಾದ್ ನಟರಾಜ್ ಕೋರಿದರು.
ಕೆಂಡದಂತಹ ಬಿರು ಬಿಸಿಲಿಗೆ ಮನುಷ್ಯರೇ ನೀರಿಗಾಗಿ ಪರದಾಡುವ ಸ್ಥಿತಿ ಒದಗಿ ಬಂದಿದೆ ಮನುಷ್ಯನ ಸ್ಥಿತಿಯೇ ಹೀಗಾದರೆ ಇನ್ನು ಪ್ರಾಣಿ ಪಕ್ಷಿಗಳ ಗೋಳು ಕೇಳುವವರಾರು ಬಿರು ಬಿಸಿಲಲ್ಲಿ ಸಿಗುವ ಒಂದು ತೊಟ್ಟು ನೀರು ಮರುಭೂಮಿಯಲ್ಲಿ ನಮಗೆ ನೀರು ದೊರಕಿದಂತೆ ಎಂದು ಹೇಳಿದರು.
ಈ ವೇಳೆ ಪಂಚಾಯತ್ ರಾಜ್ ಕಾರ್ಯದರ್ಶಿ ಲೋಕೇಶ್, ಮುಖಂಡರಾದ ಜಯ ಪ್ರಕಾಶ್, ಎಸ್. ಎನ್ ರಾಜೇಶ್ ಹಾಜರಿದ್ದರು.
