ಮೈಸೂರು: ವಿದ್ಯಾರಣ್ಯರು ಸನಾತನ ಧರ್ಮ ಹಾಗೂ ಭಾರತೀಯ ಸಂಸ್ಕೃತಿ ರಕ್ಷಿಸಿದ ಮಹನೀಯರು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಹೇಳಿದರು.
ವಿದ್ಯಾರಣ್ಯಪುರ ನಲ್ಲಿರುವ
ವಿದ್ಯಾರಣ್ಯ ಕೋಚಿಂಗ್ ಸೆಂಟರ್ ನಲ್ಲಿ ಶ್ರೀ ವಿದ್ಯಾರಣ್ಯ ಟ್ರಸ್ಟ್ ವತಿಯಿಂದ
ಯುಗಪುರುಷ ಶ್ರೀ ವಿದ್ಯಾರಣ್ಯರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ವಿದ್ಯಾರಣ್ಯರು ಹಕ್ಕ ಮತ್ತು ಬುಕ್ಕರಿಗೆ ಮಾರ್ಗದರ್ಶನ ನೀಡಿ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದರು. ದೇಶದ ಸಂಕಷ್ಟದ ಸಂದರ್ಭದಲ್ಲಿ ಸಮಾಜವನ್ನು ಒಂದಾಗಿಸುವಲ್ಲಿ ಮಹತ್ವದ ಪಾತ್ರವಹಿಸಿದರು ಎಂದು ಹೇಳಿದರು.
ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪಾಯಿ ಮಾತನಾಡಿ
ವಿದ್ಯಾರಣ್ಯರು 1331ರಲ್ಲಿ ಸನ್ಯಾಸ ಸ್ವೀಕರಿಸಿ, 1386ರಲ್ಲಿ ವಿರೂಪಾಕ್ಷ ಕ್ಷೇತ್ರದಲ್ಲಿ ಮುಕ್ತಿ ಹೊಂದಿದರು. ದಶೋಪನಿಷತ್ತುಗಳು, ಬ್ರಹ್ಮಸೂತ್ರ, ಯಾಜ್ಞವಲ್ಕ ಸ್ಮೃತಿ ಸೇರಿದಂತೆ ಅನೇಕ ಗ್ರಂಥಗಳಿಗೆ ಭಾಷ್ಯಗಳನ್ನು ರಚಿಸಿದರು.
ಜೈಮಿನಿ ನ್ಯಾಯಮಾಲಾ ಸಂಗೀತ ಸಾರ ಸೇರಿ ಇತರ ಕೃತಿಗಳ ಮೂಲಕ ಜ್ಞಾನ ಪರಂಪರೆಯನ್ನು ಶ್ರೀಮಂತ ಗೊಳಿಸಿದ್ದಾರೆ. ಅವರನ್ನು ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯರೆಂದು ಗೌರವಿಸಲಾಗುತ್ತಿದ್ದು, ಶ್ರೀರಂಗಂ ಶಾಸನಗಳಲ್ಲಿ ದ್ವಿತೀಯ ಶಂಕರ ಎಂದು ಕೀರ್ತಿಸಲಾಗಿದೆ ಎಂದು ತಿಳಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ಮಾ ವಿ ರಾಮಪ್ರಸಾದ್ ಮಾತನಾಡಿ, ಶ್ರೀ ವಿದ್ಯಾರಣ್ಯರ ಜಯಂತಿಯನ್ನು ಪ್ರತಿ ವರ್ಷವೂ ವಿಜೃಂಭಣೆಯಿಂದ ಆಚರಿಸೋಣ ಎಂದು ಹೇಳಿದರು.
ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪಾಯಿ,ಸಮಾಜ ಸೇವಕರಾದ ವಿಕ್ರಂ ಅಯ್ಯಂಗಾರ್ ,
ವಿದ್ಯಾರಣ್ಯ ಟ್ರಸ್ಟ್ ಅಧ್ಯಕ್ಷರಾದ ಡಾ.ಜಿ ವಿ ರವಿಶಂಕರ್ ಶಿಕ್ಷಕರಾದ ಧನುಷ್,ಶ್ರೀವಿದ್ಯಾ,ಪುಷ್ಪ ಮತ್ತಿತರರು ಹಾಜರಿದ್ದರು.
