ಮೈಸೂರು: ವಿದ್ಯುತ್ ಸುರಕ್ಷತೆ, ವಿದ್ಯುತ್ ಅಪಘಾತ ತಡೆ ಹಾಗೂ ಸಮರ್ಪಕ ಅಂದಾಜು ಪಟ್ಟಿ ತಯಾರಿಕೆ ಕುರಿತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಶಾಖಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ಜೆಎಲ್ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ನಡೆದ ಮೊದಲ ತಂಡದ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಸ್ಕಾಂ ನಿವೃತ್ತ ಉಪ ಪ್ರಧಾನ ವ್ಯವಸ್ಥಾಪಕ ಎ.ರಮೇಶ್ ಮಾತನಾಡಿ,ಸ್ವಯಂ ಸುರಕ್ಷತೆಯೊಂದಿಗೆ ಗ್ರಾಹಕರು, ಸಾರ್ವಜನಿಕರು, ಪ್ರಾಣಿಗಳು ಹಾಗೂ ಸೆಸ್ಕ್ ಆಸ್ತಿಗಳ ಸುರಕ್ಷತೆ ಕಾಪಾಡುವುದು ಶಾಖಾಧಿಕಾರಿಗಳ ಜವಾಬ್ದಾರಿ ಎಂದು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ವಿದ್ಯುತ್ ಅಪಘಾತಗಳ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದರೂ, ಶೂನ್ಯಕ್ಕೆ ತರಲು ಸಾಧ್ಯವಾಗಿಲ್ಲ. ಆದ್ದರಿಂದ ಸುರಕ್ಷತಾ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಕರೆ ನೀಡಿದರು.
ಅಲ್ಲದೆ ಗ್ರಾಹಕರಿಗೆ ಸ್ಟಾರ್ ರೇಟಿಂಗ್ ಹೊಂದಿರುವ ಗುಣಮಟ್ಟದ ವಿದ್ಯುತ್ ಉಪಕರಣಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುವಂತೆ ಮತ್ತು ಅಂದಾಜು ಪಟ್ಟಿ ತಯಾರಿಕೆಯಲ್ಲಿ ನಿಖರತೆ ಕಾಪಾಡುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ರಮೇಶ ಮಾಹಿತಿ ನೀಡಿದರು.
ಸೆಸ್ಕ್ ತರಬೇತಿ ಶಾಖೆಯ ಉಪ ಪ್ರಧಾನ ವ್ಯವಸ್ಥಾಪಕಿ ಎಂ.ವೈ.ಹೇಮಾ ಮಾತನಾಡಿ, ಅಪಘಾತದ ನಂತರ ಪರಿಹಾರ ಕಂಡುಕೊಳ್ಳುವುದಕ್ಕಿಂತ, ಅಪಘಾತವಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ ಎಂದು ತಿಳಿಹೇಳಿದರು.
ಕಾಮಗಾರಿ ವೇಳೆ ವೇಗಕ್ಕಿಂತ ಸುರಕ್ಷತೆಗೆ ಆದ್ಯತೆ ನೀಡಬೇಕು. ಅಂದಾಜು ಪಟ್ಟಿಯಲ್ಲಿ ಸಣ್ಣ ವ್ಯತ್ಯಾಸವಾದರೂ ನಿಗಮಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತದೆ. ಆದ್ದರಿಂದ ನಿಖರತೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ತರಬೇತಿ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಜ್ಯೋತಿ ಎನ್. ಉಪಸ್ಥಿತರಿದ್ದರು.
