ಮೈಸೂರು: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಖ್ಯಾತ ಸಾಹಿತಿ ಹಾಗೂ ಕನ್ನಡಪರ ಹೋರಾಟಗಾರ ಮಡ್ಡಿಕೆರೆ ಗೋಪಾಲ್ ಅವರ ನಿಧನಕ್ಕೆ ಅಪೂರ್ವ ಸ್ನೇಹ ಬಳಗ ಮತ್ತು ಅರಿವು ಸಂಸ್ಥೆ ತೀವ್ರ ದುಃಖ ವ್ಯಕ್ತಪಡಿಸಿವೆ.
ಅಪೂರ್ವ ಸ್ನೇಹ ಬಳಗ ಮತ್ತು ಅರಿವು ಸಂಸ್ಥೆ
ವತಿಯಿಂದ ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗೋಪಾಲ್ ಅವರ ಭಾವಚಿತ್ರ ಹಿಡಿದು ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ,ಮಡ್ಡಿಕೆರೆ ಗೋಪಾಲ್ ಅವರು ಸಾಹಿತ್ಯ ಕ್ಷೇತ್ರದ ಸಂಘಟನಾ ಚತುರ, ಅಜಾತಶತ್ರು ಹಾಗೂ ಕನ್ನಡ ನಾಡು ಕಂಡ ಅಪರೂಪದ ವ್ಯಕ್ತಿತ್ವದವರಾಗಿದ್ದರು ಎಂದು ಬಣ್ಣಿಸಿದರು.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ನಾಡಿನ ಪರಂಪರೆಯ ಉಳಿವಿಗಾಗಿ ಜೀವನಪೂರ್ತಿ ಹೋರಾಟ ನಡೆಸಿದ ಅವರು, ಯುವಕರಲ್ಲಿ ಕನ್ನಡದ ಭಾಷಾಭಿಮಾನ, ಸಾಮಾಜಿಕ ಕಳಕಳಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸಾಹಿತ್ಯ ಪರಿಷತ್ತಿನ ಭೀಷ್ಮರಂತಿದ್ದ ಅವರು ಅನೇಕ ಯುವಕರಿಗೆ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಸಾಹಿತ್ಯ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಿದ ಅವರು, ನಾಡಿನ ಮೂಲೆಮೂಲೆಗಳಲ್ಲಿ ಕನ್ನಡದ ಬೆಳಕು ಹರಡುವ ಕಾರ್ಯ ಮಾಡಿದ್ದಾರೆ. ಅವರ ಸರಳ ವ್ಯಕ್ತಿತ್ವ, ಸಂಘಟನಾ ಚಾತುರ್ಯ ಹಾಗೂ ಕನ್ನಡದ ಮೇಲಿನ ಅಚಲ ಪ್ರೀತಿ ಸದಾ ಸ್ಮರಣೀಯವಾಗಿರುತ್ತದೆ. ಅವರ ಅಗಲಿಕೆ ಮೈಸೂರು, ಕನ್ನಡ ನಾಡು ಹಾಗೂ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನುಡಿದರು.
ನಗರ ಪಾಲಿಕೆ ಮಾಜಿ ಸದಸ್ಯ ಮಾ.ವಿ. ರಾಮಪ್ರಸಾದ್ ಮಾತನಾಡಿ, ಮಡ್ಡಿಕೆರೆ ಗೋಪಾಲ್ ಅವರು ಹಾಕಿಕೊಟ್ಟ ಸಾಹಿತ್ಯ, ಸಂಸ್ಕೃತಿ ಮತ್ತು ಸಂಘಟನೆಯ ಹಾದಿ ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಲಿದೆ. ಕನ್ನಡದ ಬೆಳವಣಿಗೆಗಾಗಿ ಅವರು ಸಲ್ಲಿಸಿದ ಸೇವೆ ಎಂದೆಂದಿಗೂ ಸ್ಮರಣೀಯ ಎಂದು ಹೇಳಿದರು.
ಮತ್ತೊಬ್ಬ ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ ಮಾತನಾಡಿ, “ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗಾಗಿ ನಿರಂತರವಾಗಿ ಶ್ರಮಿಸಿದ ಮಡ್ಡಿಕೆರೆ ಗೋಪಾಲ್ ಅವರು ಜನಸಾಮಾನ್ಯರಲ್ಲಿ ಕನ್ನಡದ ಅಭಿಮಾನ ಮೂಡಿಸಿದ ಅಪರೂಪದ ವ್ಯಕ್ತಿ ಎಂದು ಹೇಳಿದರು.
ಯುವಕರನ್ನು ಸಂಘಟಿಸಿ ಕನ್ನಡಪರ ಹೋರಾಟಗಳಿಗೆ ಮುನ್ನಡೆಸಿದ ಅವರ ಕೊಡುಗೆ ಅನನ್ಯ ಎಂದು ತಿಳಿಸಿದರು.
ಜಗದೀಶ್, ನಜರ್ಬಾದ್, ನಟರಾಜ್, ರಾಘವೇಂದ್ರ, ಜೀವದಾರ ಗಿರೀಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವಿಚಂದ್ರ, ದೂರ ರಾಜಣ್ಣ, ಲೋಕೇಶ್, ಸುಚೇಂದ್ರ ತೀರ್ಥ, ಜತ್ತಿ ಪ್ರಸಾದ್, ರಾಜೇಂದ್ರ, ಎಸ್.ಎನ್. ರಾಜೇಶ್, ರಾಕೇಶ್ ಸೇರಿದಂತೆ ಹಲವರು ಸಂತಾಪ ಸಭೆಯಲ್ಲಿ ಭಾಗವಹಿಸಿ ನುಡಿನಮನ ಸಲ್ಲಿಸಿದರು.
