ಉತ್ತರ ಪ್ರದೇಶ: ಖ್ಯಾತ ಹರಿಯಾನ್ವಿ ಗಾಯಕ ಮತ್ತು ಯೂಟ್ಯೂಬರ್ ಅಂಕಿತ್ ಬಲಿಯಾನ್ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಅಂಕಿತ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಬುಧವಾರ ಸಂಜೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೋತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಿಮ್ ಒಂದರ ಹೊರಗಡೆ ಈ ದಾಳಿ ನಡೆದಿದೆ
ಅಂಕಿತ್ ಬಲಿಯಾನ್ ಅವರು ಜಿಮ್ ಮುಗಿಸಿ ತಮ್ಮ ಸ್ಕಾರ್ಪಿಯೋ ಕಾರಿನ ಬಳಿ ಬರುತ್ತಿದ್ದಾಗ, ಬೈಕ್ನಲ್ಲಿ ಬಂದ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಸುಮಾರು 18 ರಿಂದ 20 ಸುತ್ತು ಗುಂಡು ಹಾರಿಸಿದ್ದಾರೆ.
ಅಂಕಿತ್ ಅವರ ತಲೆ ಮತ್ತು ಹೊಟ್ಟೆಯ ಭಾಗಕ್ಕೆ ತೀವ್ರ ಗಾಯಗಳಾಗಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಈ ಕೊಲೆಯ ಹೊಣೆಯನ್ನು ಹರಿಯಾಣದ ಗೋಗಿ ಗ್ಯಾಂಗ್ ಪೋಸ್ಟ್ ಹಾಕುವ ಮೂಲಕ ಹೊತ್ತುಕೊಂಡಿದೆ
ಅಂಕಿತ್ ಅವರು ತಮ್ಮ ವಿರೋಧಿ ಬಣದವರನ್ನು ಭೇಟಿಯಾಗಿದ್ದರು ಮತ್ತು ಅವರ ಪರವಾಗಿ ಹಾಡು ಮಾಡಿದ್ದರು ಎಂಬ ಕಾರಣಕ್ಕೆ ಈ ಕೊಲೆ ಮಾಡಿರುವುದಾಗಿ ಗ್ಯಾಂಗ್ ಸದಸ್ಯನೊಬ್ಬ ಇನ್ಸ್ಟಾಗ್ರಾಮ್ ಮೂಲಕ ತಿಳಿಸಿ ದ್ದಾನೆ.
ಗಾಯಕನ ಕೊಲೆಯಿಂದ ಆಕ್ರೋಶಗೊಂಡ ಕುಟುಂಬಸ್ಥರು ಮತ್ತು ಸ್ಥಳೀಯರು ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ.
ಪೊಲೀಸರು ಜಿಮ್ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಹಂತಕರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಅಂಕಿತ್ ಬಲಿಯಾನ್ ಅವರು ತಮ್ಮ ಪ್ರಾದೇಶಿಕ ಹರಿಯಾನ್ವಿ ಹಾಡುಗಳ ಮೂಲಕ ಜನಪ್ರಿಯರಾಗಿದ್ದರು.
