ಯಾದಗಿರಿ: ಸಿಡಿಲು ಬಡಿದು 66 ಕುರಿ,ಮೇಕೆಗಳು ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗಡಿ ಭಾಗ, ಗುರುಮಿಠಕಲ್ ತಾಲೂಕು ಸಮೀಪ ಬುದೂರ್ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು
66 ಕುರಿ-ಮೇಕೆಗಳು ಸಾವನ್ನಪ್ಪಿವೆ.
ಬುದೂರ್ ಗ್ರಾಮಸ್ಥರಾದ ಮಲ್ಲಪ್ಪ, ಆಶಪ್ಪ, ಜಾಲ್ಲಪ್ಪ ಹಾಗೂ ಹನಮಂತ ಮತ್ತಿತರ ಕುರಿಗಾಹಿಗಳು ಕುರಿ-ಮೇಕೆಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದರು.
ಆಗ ಇದ್ದಕ್ಕಿದ್ದಂತೆ ಭಾರೀ ಗಾಳಿ ಸಹಿತ ಗುಡುಗು-ಮಿಂಚಿನ ಮಳೆ ಪ್ರಾರಂಭವಾಗಿದೆ.ಈವೇಳೆ ಭಾರೀ ಸಿಡಿಲು ಬಡಿದು 66 ಕ್ಕೂ ಹೆಚ್ಚು ಕುರಿ-ಮೇಕೆಗಳು ಮೃತಪಟ್ಟಿವೆ.
ಈ ಘಟನೆಯಿಂದ ಕುರಿಗಾಹಿಗಳಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.
ಘಟನೆ ತಿಳಿದು ಸ್ಥಳೀಯ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತಪಟ್ಟ ಕುರಿ-ಮೇಕೆಗಳ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
