ಟಿ.ನರಸೀಪುರ: ಟಿ.ನರಸೀಪುರ ತಾಲೂಕಿನ ಯಡದೊರೆ ಸರ್ಕಾರಿ ಶಾಲೆಯನ್ನು ಈ ವರ್ಷ ಕೆಪಿಎಸ್ ಮ್ಯಾಗ್ನೆಟ್ ಶಾಲೆಯಾಗಿ ಮೇಲ್ದರ್ಜೆಗೇರಿಸುವ ಸರ್ಕಾರದ ನಿರ್ಧಾರಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯರಹುಂಡಿ,ರಾಮನಾಥಪುರಹುಂಡಿ, ಮುತ್ತತ್ತಿ ಹಾಗೂ ಇಂಡವಾಳು ಶಾಲೆಗಳನ್ನು ಉಳಿಸಿಕೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರು ಎಐಡಿಎಸ್ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ನಿತಿನ್ ಮಾತನಾಡಿ, ರಾಮನಗರ ಮತ್ತು ಅರಸೀಕೆರೆಯಲ್ಲಿ ಜನರ ವಿರೋಧದ ನಡುವೆಯೂ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ. ಮೈಸೂರಿನ ಡಿಡಿಪಿಐ ಉದಯ್ ಕುಮಾರ್ ಈ ವರ್ಷವೇ 34 ಕೆಪಿಎಸ್ ಶಾಲೆಗಳನ್ನು ಮಾಡುವುದಾಗಿ ಹೇಳಿದ್ದಾರೆ. ಒಂದು ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ 1200 ಮಕ್ಕಳು ದಾಖಲಾಗಬೇಕು ಎಂಬ ಆದೇಶವಿದೆ. ಹಾಗಾದರೆ ಸುತ್ತಲಿನ ನೂರಾರು ಶಾಲೆಗಳನ್ನು ಮುಚ್ಚದೆ ಬೇರೆ ದಾರಿಯಿಲ್ಲ ಎಂದು ಹೇಳಿದರು.
ಕೆಪಿಎಸ್ಗೆ ಎಲ್ಲಾ ಸೌಲಭ್ಯ ಕೊಡುತ್ತೇವೆ ಎನ್ನುತ್ತಾರೆ, ಆದರೆ ಮೈಸೂರಿನಲ್ಲಿ ಲಭ್ಯ ಸೌಕರ್ಯದಲ್ಲೇ ನಡೆಸಲು ಸೂಚಿಸಿದ್ದಾರೆ. ಶಾಲೆಗಳೇ ಇಲ್ಲದ ಗ್ರಾಮಗಳನ್ನು ಸೃಷ್ಟಿಸಲು ಸರ್ಕಾರ ಹೊರಟಿದೆ. ಜನರು ಒಗ್ಗಟ್ಟಾಗಿ ಹೋರಾಟ ಮಾಡಿ ಸರ್ಕಾರಿ ಶಾಲೆ ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುತ್ತತ್ತಿ ಗ್ರಾಮದ ಜಯಲಕ್ಷ್ಮಿ ಮಾತನಾಡಿ, ನಮ್ಮೂರಿನ ಸರ್ಕಾರಿ ಶಾಲೆಗೆ ಶಿಕ್ಷಕರನ್ನು ನೇಮಿಸಿ, ಕೆಪಿಎಸ್ಗೆ ನೀಡುವ ಸೌಲಭ್ಯಗಳನ್ನು ನಮಗೂ ಕೊಡಲಿ. ಆಗ ಮಕ್ಕಳ ಸಂಖ್ಯೆ ತಾನಾಗೇ ಹೆಚ್ಚುತ್ತದೆ. ಸರ್ಕಾರಿ ಶಾಲೆ ಮುಚ್ಚುವುದಾದರೆ ಸಚಿವರು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಹೇಮಾ, ಚಂದ್ರಿಕಾ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸದಸ್ಯರಾದ ಸುಮಾ, ಸುನಿಲ್ ಹಾಗೂ ರಾಯರಹುಂಡಿ, ರಾಮನಾಥಪುರಹುಂಡಿ, ಮುತ್ತತ್ತಿ, ಇಂಡವಾಳು ಗ್ರಾಮಸ್ಥರು ಭಾಗವಹಿಸಿದ್ದರು.
