ಹನೂರು: ಪಕ್ಕದ ತಮಿಳುನಾಡು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇದ್ದು ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯದ ಗಡಿ ಚೆಕ್ ಪೋಸ್ಟ್ಗಳಿಗೆ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಧರ್ಮೇಂದ್ರ ಅವರು, ಪ್ರತಿನಿತ್ಯ ಕರ್ನಾಟಕದಿಂದ ತಮಿಳುನಾಡಿಗೆ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕು ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.
ವಾಹನಗಳಲ್ಲಿ ಅಕ್ರಮ ಮದ್ಯ ಸಾಗಣೆ, ಅಕ್ರಮ ಹಣ ಸಾಗಣೆ ಗೃಹೋಪಯೋಗಿ ವಸ್ತುಗಳು ಸಾಗಾಟವಾಗದಂತೆ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಆದೇಶಿಸಿದರು.
ಯಾವುದೇ ವಿಚಾರದ ಬಗ್ಗೆ ಅನುಮಾನವಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಡ್ಡಾಯವಾಗಿ ಪ್ರತಿಯೊಂದು ವಾಹನಗಳ ಸಂಖ್ಯೆ ಹಾಗೂ ಸಮಯವನ್ನು ನಮೂದು ಮಾಡಬೇಕು ಎಂದು ಧರ್ಮೇಂದ್ರ ತಿಳಿಸಿದರು.
ಪರಿಶೀಲನೆ ವೇಳೆ ಹನೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆನಂದಮೂರ್ತಿ ಹಾಗೂ ಅರ್ಧನಾರಿಪುರ ಚೆಕ್ಪೋಸ್ಟ್ ಸಿಬ್ಬಂದಿ ವರ್ಗದವರು ಹಾಜರಿದ್ದರು.
