ಮೈಸೂರು: ಮೈಸೂರಿನ ಕೆ ಆರ್ ಕ್ಷೇತ್ರ ವ್ಯಾಪ್ತಿಯ ಕುರುಬಾರಹಳ್ಳಿಯಲ್ಲಿ ಕಿರಿದಾದ ಮೋರಿಗಳಿಂದಾಗಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಅಲ್ಲಲ್ಲೇ ನಿಂತು ಗಬ್ಬು ನಾರುತ್ತಿದೆ.
ರಸ್ತೆಯ ಎರಡೂ ಬದಿ ಕಣ್ಣು ಹಾಯಿಸಿದರೆ ಬರೀ ಕೆಟ್ಟವಾಸನೆ ಬೀರುವ ಚರಂಡಿಗಳು ಕಾಣುತ್ತವೆ.
ಕುರುಬಾರಹಳ್ಳಿ ವಾರ್ಡ್ 2ನೇ ಅಡ್ಡರಸ್ತೆಯಲ್ಲಿ ಕೂರುವುದಿರಲಿ ತಿರುಗಾಡಬೇಕಾದರೂ ಮೂಗು ಮುಚ್ಚಿಕೊಂಡು ಹೋಗಬೇಕು. ಅಷ್ಟರ ಮಟ್ಟಿಗೆ ಇಲ್ಲಿನ ರಸ್ತೆ ಹಾಗೂ ಮೋರಿಗಳು ಗಬ್ಬೆದ್ದುಹೋಗಿವೆ.
ಒಳಚರಂಡಿಯಲ್ಲಿ ನೀರು ತುಂಬಿ ರಸ್ತೆಗೆ ಬರುವಂತಿದೆ.ಒಂದು ವೇಳೆ ಮಳೆ ಬಂದರೆ ಕೆಟ್ಟ ನೀರು ಬಡಾವಣೆಯ ಮನೆಗಳಿಗೆ ನುಗ್ಗಿಬಿಡುತ್ತದೆ.
ಇಲ್ಲಿ ಹಿರಿಯ ನಾಗರಿಕರು, ಮಕ್ಕಳು ಹೆಚ್ಚಾಗಿದ್ದಾರೆ. ದುರ್ವಾಸನೆ ಇದ್ದರೂ ಅನಿವಾರ್ಯವಾಗಿ ಅಲ್ಲಿ ಬದುಕುತ್ತಿದ್ದಾರೆ.
ಇಲ್ಲಿನ ಬಹುತೇಕ ನಿವಾಸಿಗಳು ಬಡ ಮಧ್ಯ ಮವರ್ಗದವರು, ಆಟೋ ಡ್ರೈವರ್ಗಳು, ದಿನಗೂಲಿ ಕುಟುಂಬದವರು.
ಸಾವಿರಾರು ಬಡ ಜನರು ವಾಸ ಮಾಡುತ್ತಿರುವ ಈ ರಸ್ತೆಯಲ್ಲಿ ಒಳಚರಂಡಿ ಸಂಪೂರ್ಣವಾಗಿ ಅವ್ಯವಸ್ಥೆಯಿಂದ ಕೂಡಿದೆ. ಈ ಒಳಚರಂಡಿ ಅವ್ಯವಸ್ಥೆಗೆ ಪ್ರಮುಖ ಕಾರಣ ಅದೇ ರಸ್ತೆಯಲ್ಲಿ ಕೆಲವರು ಹಸುಗಳನ್ನು ಸಾಕುತ್ತಿರುವುದು,ಹಸು ಸಾಕಿರುವವರು ಸಗಣಿಯನ್ನು ನೇರವಾಗಿ ಮೋರಿಯೊಳಗೆ ಹಾಕುತ್ತಿದ್ದಾರೆ. ಇದರಿಂದ ಮೋರಿ ನೀರಿನ ಜೊತೆ ಸಗಣಿ ಮಿಶ್ರಣವಾಗಿ ಮೋರಿ ನೀರು ಸಂಪೂರ್ಣವಾಗಿ ಹರಿಯಲಾಗದೆ ಸ್ಥಗಿತಗೊಂಡು, ಗಬ್ಬು ನಾರುವಂತಾಗಿದೆ.
ಮನೆಯ ಕಿಟಕಿಯನ್ನು ಕೂಡ ತೆಗೆಯಲಾಗದಷ್ಟು ವಾಸನೆಯನ್ನು ಸಹಿಸಿಕೊಂಡು ಜೀವನ ಮಾಡಬೇಕಾಗಿದೆ ಎಂದು ಇಲ್ಲಿನ ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಜತೆಗೆ ಡಾಂಬರು ಹಾಕಿದ ರಸ್ತೆಯಲ್ಲಿ ಪೈಪ್ ಲೈನ್ ಅಳವಡಿಸುವಾಗ ರಸ್ತೆ ಅಗೆದು ಹಾಗೆಯೇ ಬಿಟ್ಟಿರುವುದರಿಂದ ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿದೆ.
ಈಗ ಈ ಮೋರಿ ನೀರು ಕೂಡ ರಸ್ತೆಗೆ ಬಂದು ಇಡೀ ರಸ್ತೆ ಕೆಸರು ಗದ್ದೆಯಾಗಿದೆ. ಅಲ್ಲಲ್ಲಿ ಮೋರಿ ಸ್ವಚ್ಚ ಮಾಡಿದರೂ ಹೊರತೆಗೆದಿರುವ ಹೂಳನ್ನು ಅಲ್ಲೇ ರಸ್ತೆ ಬದಿಯಲ್ಲೇ ಉಳಿಸಲಾಗಿದೆ.
ಮಳೆ ಬಂದಾಗ ಮತ್ತೆ ಮಣ್ಣು ಚರಂಡಿಯೊಳಗೆ ಸೇರಿಕೊಳ್ಳುತ್ತದೆ,ಹಾಗಾಗಿ ನಗರಪಾಲಿಕೆ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನಿಸಿ ಇಲ್ಲಿನ ದುರವಸ್ತೆ ಸರಿಪಡಿಸಿ ತಮ್ಮನ್ನು ಪಾರು ಮಾಡಬೇಕೆಂದು ಸ್ಥಳೀಯರು ಕೋರಿದ್ದಾರೆ.ಒ
