ಮೈಸೂರು: ಅಂತೂ ಇಂತೂ ಸ್ವಾತಂತ್ರ್ಯೋತ್ಸವದ ನೆಪದಲ್ಲಾದರೂ
ತ್ಯಾಜ್ಯ ಸಂಗ್ರಹವಾಗುತ್ತಿದ್ದ ಸ್ಥಳ ಹಾಗೂ ಬಯಲು ಮೂತ್ರ ವಿಸರ್ಜನೆ ಸ್ಥಳಗಳು ಸ್ವಚ್ಛತೆ ಕಾಣುತ್ತಿರುವುದು ಸಮಾಧಾನ ತಂದಿದೆ.
80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿರುವ ಸ್ವಾತಂತ್ರ್ಯೋತ್ಸವ ಸ್ವಚ್ಛತಾ ಅಭಿಯಾನ-2026: 80 ತ್ಯಾಜ್ಯಮುಕ್ತ ತಾಣಗಳು ಅಭಿಯಾನದಡಿ ನಗರದ ವಿವಿಧ ವಲಯಗಳಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದ್ದ ಸ್ಥಳಗಳು ಹಾಗೂ ಬಯಲು ಮೂತ್ರ ವಿಸರ್ಜನೆ ಸ್ಥಳವನ್ನು ಸ್ವಚ್ಛಗೊಳಿಸಿ ಪರಿವರ್ತಿಸಲಾಗುತ್ತಿದೆ.ಈ ಕೆಲಸ ಭರದಿಂದ ಸಾಗಿದೆ.
ವಲಯ–2,ವಾರ್ಡ್–60ರ ಕೃಷ್ಣಮೂರ್ತಿಪುರಂನ ನಿತ್ಯೋತ್ಸವ ಕಲ್ಯಾಣ ಮಂಟಪ ಸಮೀಪ, ಅನಂತಸ್ವಾಮಿ ಉದ್ಯಾನವನದ ಬಳಿ ನಡೆದ ಸ್ವಚ್ಛತಾ ಕಾರ್ಯಾಚರಣೆಯಲ್ಲಿ ಸುಮಾರು 60 ಮಂದಿ ಭಾಗವಹಿಸಿ, ಅಂದಾಜು 6 ಟನ್ ತ್ಯಾಜ್ಯವನ್ನು ತೆರವುಗೊಳಿಸಿದ್ದಾರೆ.
ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆ ಮಾಜಿ ಸದಸ್ಯರು, ವಲಯ ಸಹಾಯಕ ಆಯುಕ್ತರಾದ ಗಿರೀಶ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮೀನಾಕ್ಷಿ, ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಲಯ–9, ಟಿ. ನರಸೀಪುರ ಮುಖ್ಯರಸ್ತೆಯಲ್ಲಿ ಸುಮಾರು 30 ಮಂದಿ ಭಾಗವಹಿಸಿ, ಅಂದಾಜು 2 ಟನ್ ತ್ಯಾಜ್ಯವನ್ನು ತೆರವುಗೊಳಿಸಿದರು.
ಕಾರ್ಯಪಾಲಕ ಅಭಿಯಂತರರು (ಪೂರ್ವ), ವಲಯ–9ರ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಇದೇ ವಲಯದ ವಾರ್ಡ್–39, ಗಾಯತ್ರಿಪುರಂ ಹೋಲಿ ಸೇಂಟ್ ಶಾಲೆಯ ಹಿಂಭಾಗದ ರಸ್ತೆಯಲ್ಲಿ ಸುಮಾರು 35 ಮಂದಿ ಭಾಗವಹಿಸಿ, ಅಂದಾಜು 1 ಟನ್ ತ್ಯಾಜ್ಯವನ್ನು ತೆರವುಗೊಳಿಸಿದರು.
ಪರಿಸರ ಅಭಿಯಂತರರು, ವಲಯ–9ರ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಒಟ್ಟಾರೆ ಮೂರು ಸ್ಥಳಗಳಲ್ಲಿ 125 ಮಂದಿ ಭಾಗವಹಿಸಿ, ಸುಮಾರು 9 ಟನ್ ತ್ಯಾಜ್ಯವನ್ನು ತೆರವುಗೊಳಿಸಿದ್ದಾರೆ.
ಇದೇ ಅಭಿಯಾನದಡಿ ಸಯ್ಯಾಜಿರಾವ್ ರಸ್ತೆಯಲ್ಲಿ ಸಾರ್ವಜನಿಕರು ಬಯಲು ಮೂತ್ರ ವಿಸರ್ಜನೆ ಮಾಡುತ್ತಿದ್ದ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಪರಿವರ್ತಿಸಲಾಯಿತು.
ಸ್ಥಳದ ಗೋಡೆಗಳಿಗೆ ಬಣ್ಣ ಬಳಿದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಂದೇಶಗಳು ಹಾಗೂ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಹೂವಿನ ಕುಂಡಗಳನ್ನು ಇರಿಸುವ ಮೂಲಕ ಪ್ರದೇಶವನ್ನು ಅಂದಗೊಳಿಸಲಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಸಮೀಪದಲ್ಲಿರುವ ಸಾರ್ವಜನಿಕ ಶೌಚಾಲಯದ ಕಾರ್ಯನಿರ್ವಹಣಾ ಅವಧಿಯನ್ನೂ ವಿಸ್ತರಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಸವಿತಾ ಎಂ.ಕೆ., ಕಾರ್ಯಪಾಲಕ ಅಭಿಯಂತರರಾದ ಮೃತ್ಯುಂಜಯ ಕೆ.ಎಸ್., ವಲಯ–6ರ ಸಹಾಯಕ ಆಯುಕ್ತರಾದ ಪ್ರತಿಭಾ, ಪರಿಸರ ಅಭಿಯಂತರರಾದ ಮೈತ್ರಿ, ಆರೋಗ್ಯ ನಿರೀಕ್ಷಕರಾದ ಬಸವರಾಜು ಮತ್ತು ಮಂಜುಕುಮಾರ್, ಮೇಲ್ವಿಚಾರಕರು, ಪೌರಕಾರ್ಮಿಕರು, ಸಮೀಪದ ಅಂಗಡಿ ಮಾಲೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಭಾಗವಹಿಸಿದ್ದರು.
ಪರಿವರ್ತಿಸಲಾದ ಸ್ಥಳಗಳಲ್ಲಿ ಮತ್ತೆ ತ್ಯಾಜ್ಯ ಎಸೆಯದಂತೆ ಹಾಗೂ ಬಯಲು ಮೂತ್ರ ವಿಸರ್ಜನೆ ಮಾಡದಂತೆ ನಿರಂತರ ನಿಗಾ ವಹಿಸಲಾಗುವುದು.
ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರು ಮತ್ತು ಬಯಲು ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ನಿಯಮಾನುಸಾರ ಭಾರಿ ದಂಡ ವಿಧಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
