ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿರ್ಧಾರಗಳು ನಗರಾಭಿವೃದ್ಧಿ ಸಚಿವರ ಮನೆಯಲ್ಲಿ ನಡೆಯುತ್ತಿವೆ ಎನ್ನುವ ಆರೋಪಕ್ಕೆ ಎಂಎಲ್ಸಿ ಕೌಟಿಲ್ಯ ರಘು ಅವರು ಸಾಕ್ಷ್ಯಗಳನ್ನ ಬಿಡುಗಡೆ ಮಾಡಲಿ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಸವಾಲು ಹಾಕಿದ್ದಾರೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿರ್ಧಾರಗಳು ನಗರಾಭಿವೃದ್ಧಿ ಸಚಿವರ ಮನೆಯಲ್ಲಿ ನಡೆಯುತ್ತಿದ್ದು, ಈ ಹಿಂದಿನ ಆಯುಕ್ತ ಕೆ.ಆರ್. ರಕ್ಷಿತ್ ಅವರ ಅವಧಿಯಲ್ಲಿನ ಎಲ್ಲಾ ತೀರ್ಮಾನಗಳನ್ನು ಸರ್ಕಾರ ಅಮಾನತ್ತಿನಲ್ಲಿಡಬೇಕು ಎಂಬ ಕೌಟಿಲ್ಯ ರಘು ಅವರ ಹೇಳಿಕೆಗೆ ಸುಬ್ರಹ್ಮಣ್ಯ ತಿರುಗೇಟು ನೀಡಿದ್ದಾರೆ.
ಬಾಯಿಗೆ ಬಂದಿದ್ದನ್ನೆಲ್ಲ ಹೇಳುವುದು ವಿಧಾನ ಪರಿಷತ್ ಸದಸ್ಯ ಸ್ಥಾನದಲ್ಲಿರುವ ನಿಮಗೆ ಗೌರವ ತರುವುದಿಲ್ಲ. ಗಾಳಿಯಲ್ಲಿ ಗುಂಡು ಹಾರಿಸುವ ಬದಲು ದಾಖಲೆಗಳನ್ನಿಟ್ಟು ಮಾತನಾಡಿ ಎಂದು ಆಗ್ರಹಿಸಿದ್ದಾರೆ.
ಮುಡಾ ಹಗರಣ ಈಗಾಗಲೇ ಮುಗಿದು ಸಿದ್ದರಾಮಯ್ಯ ಅವರು ಕಳಂಕ ಮುಕ್ತರಾಗಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ಮಾಡಿ ಬಿಜೆಪಿ-ಜೆಡಿಎಸ್ ನಾಯಕರು ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರೆ, ಆದರೂ ಬುದ್ಧಿ ಬಂದಿಲ್ಲ ಎಂದು ಸುಬ್ರಹ್ಮಣ್ಯ ಟೀಕಿಸಿದ್ದಾರೆ.
ಇನ್ನು ಯತೀಂದ್ರ ಸಿದ್ದರಾಮಯ್ಯ ಅವರಿಗೆ ಖಾತೆ ಬದಲಾವಣೆ ಮಾಡಬೇಕೆಂಬ ಟೀಕೆಗೆ, ಯತೀಂದ್ರ ಅವರು ಎಲ್ಲೋ ಕೂತಿದ್ದು ಬಂದು ಖಾತೆ ವಹಿಸಿ ಕೊಂಡಿಲ್ಲ. ರಾಜ್ಯ ಸುತ್ತಿದ್ದಾರೆ, ಬಾಗಲಕೋಟೆ, ದಾವಣಗೆರೆ ಉಪಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಜನರಿಗೆ ಮಾಹಿತಿ ತಲುಪಿಸಿದ್ದಲ್ಲದೇ, ಕಾಂಗ್ರೆಸ್ ಪಕ್ಷದ ಸಾಧನೆಗಳನ್ನ ಜನರ ಮುಂದಿಟ್ಟು, ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಅವರ ಸಾಮರ್ಥ್ಯ ನೋಡಿಯೇ ಹೈಕಮಾಂಡ್ ನಗರಾಭಿವೃದ್ಧಿ ಖಾತೆ ಕೊಟ್ಟಿದೆ ಎಂದು ಹೇಳಿದ್ದಾರೆ.
ಮೊದಲ ಪ್ರಯತ್ನದಲ್ಲೇ ಶಾಸಕರಾಗಿದ್ದ ಯತೀಂದ್ರ ಅಭಿವೃದ್ಧಿ ಕೆಲಸಗಳನ್ನ ಮಾಡಿ ಜನವಿಶ್ವಾಸ ಗಳಿಸಿಕೊಂಡಿದ್ದಾರೆ. 2ನೇ ಅವಧಿಗೆ ತಾವು ಗೆಲ್ಲುವ ವಿಶ್ವಾಸವಿದ್ದರೂ ಪಕ್ಷಕ್ಕಾಗಿ ಕ್ಷೇತ್ರವನ್ನ ತ್ಯಾಗ ಮಾಡಿ ಎಂಎಲ್ಸಿ ಆದರು, ಅವರ ಈ ಸೇವೆಯನ್ನ ಹೈಕಮಾಂಡ್ ಪರಿಗಣಿಸಿದೆ. ಇದರ ಬಗ್ಗೆ ಬಿಜೆಪಿ ನಾಯಕರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ,ಲೋಪಗಳಿದ್ದರೆ ಆಡಳಿತಾತ್ಮಕವಾಗಿ ಟೀಕೆ ಮಾಡಲಿ ಎಂದು ಸಲಹೆ ನೀಡಿದ್ದಾರೆ.
ಬಿಡದಿಯಲ್ಲಿ ಶಾಂತವಾಗಿ ಪ್ರತಿಭಟಿಸುತ್ತಿದ್ದ ರೈತರಿಗೆ ಇಲ್ಲಸಲ್ಲದ ಪ್ರಚೋದನೆ ನೀಡಿ ಒಕ್ಕಲೆಬ್ಬಿಸಿ, ಗಲಾಟೆ ಮಾಡಿಸಿದ್ದೀರಿ. ಯತೀಂದ್ರ ಅವರನ್ನ ಪ್ರಶ್ನಿಸಲು ನಿಮಗೆ ಯಾವ ನೈತಿಕತೆಯಿದೆ ಎಂದು ಸುಬ್ರಮಣ್ಯ ಪ್ರಶ್ನಿಸಿದ್ದಾರೆ.
