ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯ ಪಾವಿತ್ರ್ಯವನ್ನ ಹಳ್ಳ ಹಿಡಿಸುವಂತಹ ಗಂಭೀರ ಅಕ್ರಮಗಳು ರಾಜ್ಯದ ಹಲವೆಡೆ ಬೆಳಕಿಗೆ ಬಂದಿವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಬಿಎಲ್ಒಗಳು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಬೇಕೆಂಬ ಚುನಾವಣಾ ಆಯೋಗದ ಸ್ಪಷ್ಟ ಮಾರ್ಗಸೂಚಿಯನ್ನು ಕಡೆಗಣಿಸಿ, ಅಪಾರ್ಟ್ಮೆಂಟ್ಗಳು ಹಾಗೂ ಧಾರ್ಮಿಕ ಸ್ಥಳಗಳಲ್ಲಿ ನಿವಾಸಿಗಳನ್ನು ಗುಂಪು ಗುಂಪಾಗಿ ಸೇರಿಸಿ ಅರ್ಜಿಗಳನ್ನು ಭರ್ತಿ ಮಾಡಿಸುತ್ತಿರುವ ವರದಿಗಳು ಬಹಿರಂಗವಾಗಿವೆ ಎಂದು ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಡಿ.ಕೆ.ಶಿವಕುಮಾರ್ ಅವರೇ,ಚುನಾವಣಾ ಆಯೋಗದ ನಿಯಮಗಳನ್ನು ಈ ರೀತಿ ಗಾಳಿಗೆ ತೂರುತ್ತಿರುವುದರ ಹಿಂದೆ ಯಾರ ಕೈವಾಡವಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಸೈಬರ್ ಕೇಂದ್ರಗಳಲ್ಲಿ ನಕಲಿ ಜನನ ಪ್ರಮಾಣಪತ್ರಗಳು, ವಾಸಸ್ಥಳ ದೃಢೀಕರಣ ಪತ್ರಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಸೃಷ್ಟಿಸುವ ದಂಧೆ ನಿರಾತಂಕವಾಗಿ ನಡೆಯುತ್ತಿರುವ ಆರೋಪಗಳೂ ಕೇಳಿಬರುತ್ತಿವೆ.
ಒಂದು ಕಡೆ ಚುನಾವಣಾ ಆಯೋಗದ ನಿಯಮಗಳನ್ನೇ ಬುಡಮೇಲು ಮಾಡಿ ಗುಂಪು ಗುಂಪಾಗಿ ಅರ್ಜಿಗಳನ್ನು ಭರ್ತಿ ಮಾಡಲಾಗುತ್ತಿದೆ.
ಮತ್ತೊಂದು ಕಡೆ ನಕಲಿ ದಾಖಲೆಗಳ ಮೂಲಕ ಮತದಾರರ ಪಟ್ಟಿಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ.
ಇಷ್ಟೆಲ್ಲಾ ಬೆಳವಣಿಗೆಗಳು ನಿಮ್ಮ ಸರ್ಕಾರದ ಮೂಗಿನ ನೇರದಲ್ಲೇ ನಡೆಯುತ್ತಿದ್ದರೂ ಸರ್ಕಾರ ಮತ್ತು ಪೊಲೀಸರು ಮೌನವಾಗಿರುವುದು ಏಕೆ?
ಇದರ ಹಿಂದೆ ಯಾರನ್ನಾದರೂ ರಕ್ಷಿಸುವ ಹುನ್ನಾರ ಅಡಗಿದೆಯೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ತಕ್ಷಣ ಗುಂಪು ಗುಂಪಾಗಿ ಅಕ್ರಮವಾಗಿ ಅರ್ಜಿ ಭರ್ತಿ ಮಾಡಿಸುತ್ತಿರುವವರ ವಿರುದ್ಧ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸುವ ಜಾಲದ ವಿರುದ್ಧ ಕಠಿಣ ಕ್ರಿಮಿನಲ್ ಪ್ರಕರಣ ದಾಖಲಿಸಿ, ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವದ ತಳಹದಿಯಾದ ಮತದಾರರ ಪಟ್ಟಿಯ ಪಾವಿತ್ರ್ಯಕ್ಕೆ ಧಕ್ಕೆ ತಂದರೆ, ರಾಜ್ಯಾದ್ಯಂತ ತೀವ್ರ ಜನಾಂದೋಲನ ಅನಿವಾರ್ಯ ವಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಎಚ್ಚರಿಸಿದ್ದಾರೆ.
