(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕಡತವಿಲ್ಲದೆ ಏಕೆ ಸಭೆ ಮಾಡುತ್ತಿದ್ದೀರಾ, ಕಾಮಗಾರಿ ನಡೆಯದ ಬಹುತೇಕ ಕಾಮಗಾರಿಗಳಿಗೆ ಬಿಲ್ ಪಾವತಿ ಮಾಡಿದ್ದೀರಿ, ಕೆಲಸ ಆಗಿರುವ ಬಗ್ಗೆ ಯಾವುದೆ ದಾಖಲೆ ಕಡತಗಳನ್ನು ಒದ ಗಿಸಿಲ್ಲ..ಹೀಗೆ ಗ್ರಾಮಸ್ಥರು ಪಿಡಿಒ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧ ನಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ಸಿಂಗನಲ್ಲೂರು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ನರೇಗಾ ಯೋಜನೆ ಹಾಗೂ 15 ನೇ ಹಣಕಾಸು ಯೋಜನೆ 2025 – 26 ನೇ ಸಾಲಿನ 2 ನೇ ಹಂತದ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ಗ್ರಾಮದ ಜನ ಅಧಿಕಾರಿಗಳಿಗೆ ಹೀಗೆ ಚಳಿ ಬಿಡಿಸಿದರು.
ಕ್ರಿಯಾಯೋಜನೆ ತಯಾರಿಸುವಲ್ಲಿ ಲೋಪ ಎಸಗಲಾಗುತ್ತಿದೆ, ಉಳ್ಳವರಿಗೆ, ಪ್ರಬಲ ರಿಗೆ ಆದ್ಯತೆ ನೀಡಲಾಗಿದೆ. ಪಿಡಿಒ ಕರ್ತವ್ಯ ಲೋಪ ದಿಂದ ಜಾಬ್ ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕ ರಿಗೆ ಅನ್ಯಾಯವಾಗುತ್ತಿದೆ. ಗ್ರಾಮ ಪಂಚಾಯಿತಿಯಲ್ಲಿ ಲಕ್ಷಾಂತರ ರೂ.ಗಳನ್ನು ಗೋಲ್ಮಾಲ್ ಮಾಡಲಾಗಿದೆ ಎಂದು ಗ್ರಾಮಸ್ಥರು ಪಿಡಿಒ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧನಾಧಿಕಾರಿ ಗಳನ್ನು ತರಾಟೆಗೆ ತೆಗೆದು ಕೊಂಡರೆ, ಈ ಇಬ್ಬರೂ ಸಮರ್ಪಕ ಉತ್ತರ ನೀಡಲಾಗದೆ ತಡವರಿಸಿದರು.
ಸಾಮಾಜಿಕ ಪರಿಶೋಧನಾಧಿಕಾರಿ ಸಿದ್ದಪ್ಪಾಜಿ ಅವರು ನರೇಗಾ ಯೋಜನೆ ಹಾಗೂ 15 ನೇ ಹಣಕಾಸು ಯೋಜನೆಯಡಿ ನಡೆದಿರುವ ಕಾಮಗಾರಿಗಳ ವಿವರವನ್ನು ಸಭೆಗೆ ಓದಿ ಹೇಳುತ್ತಿದಂತೆ ಗ್ರಾಮಸ್ಥರು ಮಾತನಾಡಿ ನರೇಗಾ ಯೋಜನೆ ಕೆಲಸಗಳು ಸಮರ್ಪಕ ವಾಗಿ ನಡೆದಿಲ್ಲ. ಯೋಜನೆಯ ಬಗ್ಗೆ ಗ್ರಾಮದಲ್ಲಿ ಸಾರ್ವಜನಿಕರಿಗೆ ಯಾವುದೇ ಮಾಹಿತಿಗಳನ್ನು ನೀಡದೆ, ಕಾಮಗಾರಿಗಳನ್ನು ನಡೆಸದೆ ಸುಳ್ಳು ಲೆಕ್ಕ ತೋರಿಸಿ ಬಿಲ್ ಗಳನ್ನು ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಗ್ರಾಮದ ಯುವಕ ಮಹೇಶ್ ಎಸ್, ಎಂಬುವರು ಮಾತನಾಡಿ. ಗ್ರಾಮದ ಸಂತೇಮಾಳ ಕೆರೆ ಹೂಳೆತ್ತುವ ಕಾಮಗಾರಿ ನಡೆದೇ ಇಲ್ಲ. ಆದರೂ ಕಾಮಗಾರಿಗೆ ಗುತ್ತಿಗೆದಾರ ಎಂ. ಕೃಷ್ಣ ಎಂಬುವರ ಹೆಸರಿನಲ್ಲಿ 3.73 ಲಕ್ಷ ರೂ. ಬಿಲ್ ಮಾಡಲಾಗಿದೆ, ಕೆಲಸ ಆಗಿರುವ ಬಗ್ಗೆ ಯಾವುದೆ ದಾಖಲೆ ಕಡತಗಳನ್ನು ಒದಗಿಸಿಲ್ಲ. ಸಾಮಾಜಿಕ ಪರಿಶೋಧನಾಧಿಕಾರಿಗಳು ಕಾಮಗಾರಿ ನಡೆದಿರುವ ಸ್ಥಳ ಪರಿಶೀಲನೆ ಮಾಡಿಲ್ಲ ಇಲ್ಲೂ ಕೂಡ ಅಕ್ರಮವಾಗಿದೆ. ನರೇಗಾ ಯೋಜನೆ ಯಡಿ ಎನ್ ಎಂ ಆರ್ ಗಳಿಗೆ ಒಬ್ಬರೇ ಸಹಿ ಮಾಡಿ ಹಣ ಡ್ರಾ ಮಾಡ ಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದಿಂದ ಬಂದಿರುವ ನರೇಗಾ ಅನನುಭವಿಗಳ ಪಟ್ಟಿಯನ್ನು ನೋಟಿಸ್ ಬೋರ್ಡ್ (ಸೂಚನಾ ಫಲಕ) ಗೆ ಹಾಕುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಮಾಹಿತಿ ಕೊರತೆಯಾಗಿದೆ, ಕ್ರಿಯಾ ಯೋಜನೆ ಯಲ್ಲಿ ಉಳ್ಳವರಿಗೆ, ಪ್ರಬಲರಿಗೆ ಆದ್ಯತೆ ನೀಡಲಾಗಿದೆ. ಕ್ರಿಯಾಯೋಜನೆ ತಯಾರಿಸುವಲ್ಲಿ ಲೋಪವಾಗುತ್ತಿದೆ. ಪಿಡಿಒ ಅವರ ಕರ್ತವ್ಯ ಲೋಪದಿಂದ ಜಾಬ್ ಕಾರ್ಡ್ ಹೊಂದಿ ರುವ ಕೂಲಿ ಕಾರ್ಮಿಕರಿಗೆ ಅನ್ಯಾಯ ಆಗುತ್ತಿದೆ. ವಿಬಿಜಿ ರಾಮ್ ಜಿ, ಯೋಜನೆಯ ಹೊಸ ಉದ್ಯೋಗ ಚೀಟಿ ಯಾರಿಗೂ ಕೊಟ್ಟಿಲ್ಲ. ಮಾಹಿತಿ ಕೊರತೆಯಿಂದ ಸರ್ಕಾರದ ಯೋಜನೆಗಳು ಗ್ರಾಮದಲ್ಲಿನ ಫಲಾನುಭವಿ ಗಳು, ಸಾರ್ವಜನಿಕರಿಗೆ ಸಮರ್ಪಕವಾಗಿ ಸಿಗುತ್ತಿಲ್ಲ, ಹಾಗೂ ಪಂಚಾಯಿತಿಯಲ್ಲಿರುವ ಕಸ ಸಾಗಿಸುವ ಸ್ವಚ್ಛತಾ ವಾಹನ ಕೆಟ್ಟು ನಿಂತಿದ್ದು ಅದು ಕೂಡ ಉಪಯೋಗಕ್ಕೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿ ಸಿದರು.
ಪಂಚಾಯ್ತಿಗೆ ಸಂಬಂಧಿಸಿದ ಸಾಮಗ್ರಿಗಳ ಖರೀದಿಯಲ್ಲಿ ನಿಯಮವಿಲ್ಲ, ನಿಗಧಿತ ಬೆಲೆಗಿಂತ ಹೆಚ್ಚು ಬಿಲ್ ಪಾವತಿಸಲಾಗುತ್ತಿದೆ. ಅಲ್ಲದೆ ಸಾಮಗ್ರಿ ಖರೀದಿಸದೆ ಎಲೆಕ್ಟ್ರಿಕಲ್ ಅಂಗಡಿಯವರ ಜೊತೆ ಶಾಮೀಲಾಗಿದ್ದೀರಿ ಎಂದು ನೇರ ಆರೋಪ ಮಾಡಿದ ಸಿಂಗನಲ್ಲೂರು ಗ್ರಾಮದ ಯುವಕ ಪ್ರವೀಣ್ ರವರು ಪಂಚಾಯಿತಿಯಲ್ಲಿ ಪಾರದರ್ಶಕವಾಗಿ ಬಿಲ್ ಪಾವತಿ ಮಾಡುತ್ತಿಲ್ಲ. ಪಟ್ಟಣದ ಹರಿ ಎಲೆಕ್ಟ್ರಿಕಲ್ಸ್ ಹಾಗೂ ಅಮರ್ ಎಲೆಕ್ಟ್ರಿಕಲ್ಸ್ ರವರ ಜೊತೆ ಶಾಮೀಲಾಗಿ ಸಾಮಗ್ರಿ ಖರೀದಿಸದಿದ್ದರೂ ಸಹ ಕಮಿಷನ್ ನೀಡಿ ಎಲೆಕ್ಟ್ರಿಕಲ್ ಅಂಗಡಿಯವರ ಮೂಲಕ ಕಳ್ಳ ಬಿಲ್ ಮಾಡಿಸಿಕೊಂಡು ಬಂದು ಇಲ್ಲಿ ಎಲ್ಲರೂ ಹಂಚಿ ಕೊಳ್ಳುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.
ಇಲ್ಲಿ ನಡೆಸಲಾಗುವ ಎಲ್ಲಾ ವಹಿವಾಟು ಗಳ ಬಿಲ್ ಗಳನ್ನು ಅಸ್ಪಷ್ಟವಾಗಿ ಕಾಣುವಂತೆ ಮಸುಕು ಮಾಡಲಾಗುತ್ತದೆ. ಕೇಳಿದರೆ ಪಂಚಾಯ್ತಿ ಸಾಪ್ಟ್ವೇರ್ ನಲ್ಲಿ ಎಲ್ಲಾ ಬಿಲ್ ಗಳು ಮಸುಕಾಗಿಯೇ ಬುರುವುದು ಎಂದು ಸಮಜಾಯಿಸಿ ನೀಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೀದಿ ನಲ್ಲಿಗಳ ಹೊಡೆದು ಹೋದ ಪೈಪ್ ಗಳ ರಿಪೇರಿ ಗೆಂದು 5 ರಿಂದ 6 ಸಾವಿರ ರೂ.ಗಳ ವರೆಗೂ ಬಿಲ್ ಮಾಡಿ ಕೊಳ್ಳಲಾಗುತ್ತಿದೆ. ಜುಲೈ 30 ರಲ್ಲಿ ಪಂಚಾಯ್ತಿ ವ್ಯಾಪ್ತಿಯ ಬೂದೂಬಾಳುವಿನಲ್ಲಿ ಎರಡು ಬೋರ್ ಗಳಿಗೆ ಮೋಟಾರ್ ಅಳವಡಿಸಲಾಗಿದೆ ಎಂದು 4500 ರೂ ರಂತೆ ಎರಡು ಬಾರಿ 90 ಸಾವಿರ ರೂ. ಬಿಲ್ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಮೂರು ವರ್ಷಗಳ ಹಿಂದೆ ಗ್ರಾಮದ ಬೀದಿಗಳಲ್ಲಿ ಹಾಕಲಾಗಿದ್ದ ಸೋಲಾರ್ ಲೈಟ್ ಗಳು ಹಾಳಾಗಿದ್ದು ಅವಗಳನ್ನು ಇದುವರೆಗೂ ರಿಪೇರಿ ಮಾಡಿಸದೆ ಕರ್ತವ್ಯಲೋಪ ವೆಸಗಿದ್ದಾರೆ.
ಐತಿಹಾಸಿಕ ಪುರಾಣ ಪ್ರಸಿದ್ದ ಸಿಂಗನಲ್ಲೂರು ಗ್ರಾಮದ ಕಟ್ಟೆ ಬಸವೇಶ್ವರ ದೇವಸ್ಥಾನದ ಹಿಂಭಾಗ ಶೌಚಾಲಯದ ಗೋಡೆಯ ಚರಂಡಿ ಪಕ್ಕದಲ್ಲಿ ಮಲಮೂತ್ರ ವಿಸರ್ಜನೆ ಮಾಡಿ ಗಬ್ಬೆದ್ದಿದೆ, ಮಹದೇಶ್ವರ ಬೆಟ್ಟಕ್ಕೆ ಹೋಗುವ ಪಾದಯಾತ್ರಿಗಳಿಗೆ ಹಾಗೂ ಪಕ್ಕದ ಶಾಲೆ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ ಆದರೆ ಪಂಚಾಯಿತಿ ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ತರಾಟೆಗೆ ತೆಗೆದು ಕೊಂಡರು.
ಸಿಂಗನಲ್ಲೂರು ಗ್ರಾಮದ ಮೂರನೇ ವಾರ್ಡಿನಲ್ಲಿ ನೀರು ಪೋಲ್ ಆಗುತ್ತಿದ್ದರೂ ದುರಸ್ಥಿ ಮಾಡಿಲ್ಲ, ಬಿ ಗುಂಡಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಮೋಟಾರ್ ಕೆಟ್ಟು ಹೋಗಿದ್ದು ಕುಡಿಯಲು ನೀರಿಲ್ಲದೆ ಜನ ಪರದಾಡುತ್ತಿದ್ದಾರೆ ಹಾಗೆಯೇ ಬೀದಿ ದೀಪಗಳನ್ನು ಅಳವಡಿಸಿಲ್ಲ ಚರಂಡಿ ನಿರ್ಮಿಸಿ ಕೊಟ್ಟಿಲ್ಲ ಎಂದು ಬಿ ಗುಂಡಾಪುರ ಗ್ರಾಮದ ಜವರಯ್ಯ ಎಂಬುವರು ದೂರಿದರು.
ಬೂದುಬಾಳು ಗ್ರಾಮದಲ್ಲಿ ಸೋಲಾರ್ ಲೈಟ್ ಅಳವಡಿಸಿಲ್ಲ, ಬೀದಿ ದೀಪವಿಲ್ಲ, ಗ್ರಾಮದ ಬಹುತೇಕ ಬೀದಿಗಳಲ್ಲಿ ಚರಂಡಿ ಇಲ್ಲ, ಕಾಟಚಾರಕ್ಕೆ ಸಭೆ ಮಾಡಿ ಮುಗಿಸು ತ್ತಿದ್ದೀರಾ ಎಂದು ಬೂದುಬಾಳು ಗ್ರಾಮದ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಸಿಂಗನಲ್ಲೂರು ವೃತ್ತದ ಗ್ರಾಮ ಆಡಳಿತ ಅಧಿಕಾರಿ ಪ್ರಶಾಂತ್ ಅವರು ಸಭೆಗೆ ಹಾಜರಾಗದಿದ್ದ ಕಾರಣ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಪಂಚಾಯಿತಿ ಆಡಳಿತ ಅಧಿಕಾರಿ ಕಬಿನಿ ಇಲಾಖೆ ಎಇಇ ರಾಮಕೃಷ್ಣ, ಪಿಡಿಒ ರೂಪ ಬಡಿಗೆರೆ ಮತ್ತಿತರರು ಹಾಜರಿದ್ದರು.
