ಮೈಸೂರು: ಮೈಸೂರು ಭಾಗದ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಸಿದ್ದರಾಮಯ್ಯ ಮತ್ತು ಎಚ್.ಸಿ. ಮಹದೇವಪ್ಪ ಅವರ ನಡುವಿನ ಮುನಿಸು ಮುಂದುವರೆದಿದೆ.
ಸಚಿವ ಸ್ಥಾನ ಕೈ ತಪ್ಪಿದ ಬಳಿಕ ಎಚ್.ಸಿ. ಮಹದೇವಪ್ಪ ಸಿದ್ದರಾಮಯ್ಯ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಮೈಸೂರಿಗೆ ಸಿದ್ದರಾಮಯ್ಯ ಆಗಮಿಸಿದ್ದ ವೇಳೆಯೂ ಅವರನ್ನು ಭೇಟಿಯಾಗದೆ ಮಹದೇವಪ್ಪ ಅಂತರ ಕಾಯ್ದುಕೊಂಡಿದ್ದರು.
ಇದೀಗ ಈ ಇಬ್ಬರು ನಾಯಕರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ನವೆಂಬರ್ 26, 27 ರಂದು ರಾಜ್ಯಮಟ್ಟದ ಸಮಾಲೋಚನಾ ಸಮಾವೇಶಕ್ಕೆ ಎಚ್.ಸಿ. ಮಹದೇವಪ್ಪ ಸಿದ್ಧತೆ ನಡೆಸಿದ್ದಾರೆ. ದಲಿತ ಸಂಘರ್ಷ ಸಮಿತಿ, ಐಕ್ಯತಾ ಹೋರಾಟ ಚಾಲನಾ ಸಮಿತಿ, ಸಂವಿಧಾನ ಜನಾಂದೋಲನ ಸಮಿತಿ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಈ ಕಾರ್ಯಕ್ರಮದ ನೇತೃತ್ವವನ್ನು ಎಚ್.ಸಿ. ಮಹದೇವಪ್ಪ ವಹಿಸಿಕೊಂಡಿದ್ದಾರೆ.
ಮತ್ತೊಂದೆಡೆ ಅದೇ ದಿನ ಮೈಸೂರಿನಲ್ಲಿ ಸಂವಿಧಾನ ದಿನ ಆಚರಣೆಗೆ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಕುರಿತು ಮೈಸೂರು ವಿಭಾಗದ ಕಾಂಗ್ರೆಸ್ ಶಾಸಕರ ಸಭೆಯನ್ನು ಸಿದ್ದರಾಮಯ್ಯ ನಡೆಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸಭೆಗೆ ಎಚ್.ಸಿ. ಮಹದೇವಪ್ಪ ಗೈರಾಗಿದ್ದುದು ಎಲ್ಲರ ಗಮನ ಸೆಳೆದಿದೆ.
ರಾಜ್ಯಮಟ್ಟದ ಸಮಾಲೋಚನಾ ಸಮಾವೇಶ ಕುರಿತು ಎಚ್.ಸಿ. ಮಹದೇವಪ್ಪ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಮತ್ತೊಂದೆಡೆ ಸಚಿವ ನರೇಂದ್ರ ಸ್ವಾಮಿ ಅವರಿಂದಲೂ ಸಂವಿಧಾನ ದಿನ ಸಮಾವೇಶದ ಪೂರ್ವಭಾವಿ ಸಭೆ ನಡೆಯುತ್ತಿದೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ನರೇಂದ್ರ ಸ್ವಾಮಿ ಸಭೆ ನಡೆಸಿದ್ದಾರೆ.
ಸಿದ್ದರಾಮಯ್ಯ ಮತ್ತು ಎಚ್.ಸಿ. ಮಹದೇವಪ್ಪ ಅವರ ಈ ನಡೆ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ,ಎನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
