ಮೈಸೂರು: ಅರಮನೆಗಳ ನಗರಿ ಮೈಸೂರಿಗೆ ವರ್ಷದ 365 ದಿನವೂ ಪ್ರವಾಸಿಗರು ಬರುವ ಹಿನ್ನೆಲೆಯಲ್ಲಿ ದೊಡ್ಡಕೆರೆ ಮೈದಾನದಲ್ಲಿ ಶಾಶ್ವತವಾದ ವಸ್ತುಪ್ರದರ್ಶನ ತಾಣ ಮಾಡುವುದು ಸೂಕ್ತ ಎಂದು ಸಚಿವ ಈಶ್ವರ ಬಿ. ಖಂಡ್ರೆ ಸಲಹೆ ನೀಡಿದ್ದಾರೆ.
ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷ ದಸರಾ ಅಂಗವಾಗಿ 90 ದಿನಗಳ ಕಾಲ ವಸ್ತುಪ್ರದರ್ಶನ ನಡೆದೇ ನಡೆಯುತ್ತದೆ. ಈ ಸಂದರ್ಭದಲ್ಲಿ ತಾತ್ಕಾಲಿಕ ಮಳಿಗೆ ಮಾಡುವ ಬದಲು ಶಾಶ್ವತ ಮಳಿಗೆ ಮಾಡಿದರೆ ವರ್ಷವಿಡೀ ನವ ನವೀನ ವಿಚಾರಗಳನ್ನು ಪ್ರದರ್ಶಿಸಲು ಅವಕಾಶವಾಗುತ್ತದೆ ಎಂದು ಹೇಳಿದರು.
ಮೈಸೂರು ಪ್ರವಾಸಿಗರ ಸ್ವರ್ಗವಾಗಿದ್ದು, ದಸರಾ ಮಹೋತ್ಸವದ ಸಂದರ್ಭದಲ್ಲಿ ಮಾತ್ರವಲ್ಲದೆ ವರ್ಷವಿಡೀ ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಾರೆ. ಜೊತೆಗೆ ವಸ್ತುಪ್ರದರ್ಶನ ಮೈದಾನ ಅರಮನೆಯ ಮುಂಭಾಗದಲ್ಲೇ ಇರುವ ಕಾರಣ ವರ್ಷವಿಡೀ ಜನರು ಬರಬಹುದಾಗಿದೆ. ಈ ಬಗ್ಗೆ ಸಾಧಕ-ಬಾಧಕಗಳ ಚರ್ಚೆಯಾಗಬೇಕು ಎಂದು ತಿಳಿಸಿದರು.
ಇಲಾಖೆಯ ಮಾಹಿತಿಯುಳ್ಳ ಮಳಿಗೆಯನ್ನು ಉದ್ಘಾಟಿಸಲಾಗಿದ್ದು, ಇದರಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ, ಇ-ಸ್ವತ್ತು, ಗ್ರಾಮೀಣ ರಸ್ತೆ, ಗ್ರಾಮೀಣ ವಸತಿ ಯೋಜನೆ, ವಿಬಿಜಿ ರಾಮ್ ಜಿ ಮಾಹಿತಿಯ ಜೊತೆಗೆ ತಾವು ಸಚಿವರಾದ ನಂತರ ಘೋಷಿಸಿರುವ ಫಲವೃಕ್ಷೋದ್ಯಾನ, ಬಸ್ ತಂಗುದಾಣಗಳ ನಿರ್ಮಾಣ ಇತ್ಯಾದಿ ಮಾಹಿತಿಯನ್ನೂ ಒದಗಿಸಲಾಗಿದೆ ಎಂದು ತಿಳಿಸಿದರು.
ಮಳಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಮಾಹಿತಿ ಪಡೆಯಬೇಕು ಎಂದು ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದರು.
