ಶ್ರೀಲಂಕಾ: ಶ್ರೀಲಂಕಾದ ಪಶ್ಚಿಮ ಕರಾವಳಿ ನಗರ ನೆಗೊಂಬೊ ಜೈಲಿನಲ್ಲಿ ಹಿಂಸಾಚಾರ ನಡೆದಿದ್ದು,26 ಮಂದಿ ಮೃತಪಟ್ಟಿದ್ದಾರೆ
ಜೈಲಿನೊಳಗೆ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ 26 ಮಂದಿ ಮೃತಪಟ್ಟರೆಂದು ಜೈಲು ಅಧಿಕಾರಿಗಳು ತಿಳಿಸಿ ದ್ದಾರೆ.
ಈ ಜೈಲಿನಲ್ಲಿ ಭಾನುವಾರ ಎರಡು ಗುಂಪುಗಳ ನಡುವೆ ಜಗಳ ಪ್ರಾರಂಭವಾಗಿ ಘರ್ಷಣೆ ಭುಗಿಲೆದ್ದಿದೆ. ಗಲಭೆ ನಡೆಸುತ್ತಿದ್ದ ಕೈದಿಗಳು ಜೈಲಿನ ಬಂದೂಕುಗಳನ್ನು ವಶಪಡಿಸಿಕೊಂಡಿದ್ದರಿಂದ ಸೋಮವಾರ ಮತ್ತೆ ಸಂಘರ್ಷ ತಾರಕಕ್ಕೇರಿತ್ತು.
ಈ ಘರ್ಷಣೆ ಹಿಂಸಾಚಾರಕ್ಕೆ ತಿರುಗಿ 26 ಕೈದಿಗಳು ಸಾವನ್ನಪ್ಪಿದ್ದಾರೆ.100 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಜೈಲಿನಲ್ಲಿ ಮಾದಕ ದ್ರವ್ಯ ಕಳ್ಳ ಸಾಗಣೆಗೆ ಬೆಂಬಲಿಸುತ್ತಿದ್ದ ಗುಂಪು ಮತ್ತು ಇಂತಹ ಚಟುವಟಿಕೆಯನ್ನು ವಿರೋಧಿಸಿದ ಗುಂಪಿನ ನಡುವೆ ಈ ಹಿಂಸಾಚಾರ ನಡೆಯಿತು ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ.
ಘಟನೆ ಬೆನ್ನಲ್ಲೇ ರಾಜ್ಯ ಪೊಲೀಸ್ ವಿಶೇಷ ಟಾಸ್ಕ್ ಫೋರ್ಸ್ (ಎಸ್ಟಿಎಫ್) ಬೆಂಬಲದೊಂದಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಪರಿಸ್ಥಿತಿಯನ್ನು ಹತೋಟಿಗೆ ತರಲು ಮೂವರು ಕೈದಿಗಳನ್ನು ಪಲ್ಲನ್ಸೇನಾ ಜೈಲು ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
ಘರ್ಷಣೆಗೆ ಕಾರಣ ಮತ್ತು ಸಂದರ್ಭಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಕಾರಾಗೃಹ ಆಯುಕ್ತರು ಸೂಚನೆ ನೀಡಿದ್ದಾರೆ.
