ಮೈಸೂರು: ಹೆಣ್ಣು ಮಕ್ಕಳು ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣವನ್ನು ಪಡೆದು ದೇಶಕ್ಕೆ ಒಳ್ಳೆಯ ಪ್ರಜೆಗಳಾಗಬೇಕು ಎಂದು ಸಚಿವ ಡಾ. ಹೆಚ್.ಸಿ ಮಹಾದೇವಪ್ಪ ಅವರು ಸಲಹೆ ನೀಡಿದರು.
ನಗರದ ಮಹಾರಾಣಿ ಮಹಿಳಾ ಮತ್ತು ನಿರ್ವಹಣಾ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ವೇದಿಕೆ 2025-26 ಸಮಾರೋಪ ಸಮಾರಂಭ ಉದ್ಘಾಟಿಸಿ ಮಹದೇವಪ್ಪ ಮಾತನಾಡಿದರು.
ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ಮಹಾನ್ ಚೇತನಗಳ ದೂರದೃಷ್ಟಿಯೇ ಮೂಲ ಕಾರಣ. ಅವರ ಕೊಡುಗೆಯಿಂದಾಗಿ ಇಂದು ಮೈಸೂರು ಮಾದರಿ ನಗರವಾಗಿ ಬೆಳೆದಿದೆ ಎಂದು ಸ್ಮರಿಸಿದರು.
ಇಂದು ನಾವು ಸ್ವತಂತ್ರವಾಗಿ ವ್ಯವಹರಿಸಲು ಮತ್ತು ಮಾತನಾಡಲು ಶಕ್ತಿ ನೀಡಿದವರು ಡಾ. ಬಿ. ಆರ್. ಅಂಬೇಡ್ಕರ್. ಅವರು ನಮಗೆ ನೀಡಿದ ಬೃಹತ್ ಸಂವಿಧಾನವೇ ನಮ್ಮೆಲ್ಲರ ಶಕ್ತಿ. ಇಂದು ಸರ್ವೋಚ್ಚ ನ್ಯಾಯಾಲಯದಿಂದ ಹಿಡಿದು ಸಾಮಾನ್ಯ ಮಠಗಳವರೆಗೆ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸಂವಿಧಾನದ ಪ್ರಸ್ತಾವನೆಯನ್ನು ಓದುವುದು ಕಡ್ಡಾಯವಾಗಿದೆ. ಇದು ನಮ್ಮ ಸಂವಿಧಾನಕ್ಕಿರುವ ಅಪ್ರತಿಮ ಮೌಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಸಚಿವರು ಹೇಳಿದರು.
ಡಾ: ಬಿ.ಆರ್ ಆಂಬೇಡ್ಕರ್ ಅವರು ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪರವಾಗಿ ಮಾತ್ರವಲ್ಲದೆ, ಮಹಿಳೆಯರ ಮೇಲಿನ ಶೋಷಣೆಯ ವಿರುದ್ಧವೂ ನಿರಂತರವಾಗಿ ಹೋರಾಡಿದವರು. ಸತಿ ಪದ್ಧತಿಯಂತಹ ಕ್ರೂರ ಸಂಪ್ರದಾಯಗಳನ್ನು ವಿರೋಧಿಸಿದರು, ಮನುಸ್ಮೃತಿಯಲ್ಲಿದ್ದ ಅಸಮಾನತೆಯ ವ್ಯವಸ್ಥೆಗಳನ್ನು ಖಂಡಿಸಿದರು, ಮಹಿಳಾ ಶಿಕ್ಷಣ ಮತ್ತು ಹಕ್ಕುಗಳಿಗಾಗಿ ಪ್ರಬಲವಾಗಿ ಧ್ವನಿ ಎತ್ತಿದರು. ಇಂದು ಬಹುತೇಕ ಪರೀಕ್ಷೆಗಳ ಫಲಿತಾಂಶದಲ್ಲಿ ಹೆಣ್ಣುಮಕ್ಕಳು ಮೇಲುಗೈ ಸಾಧಿಸುತ್ತಿರುವುದಕ್ಕೆ ಮತ್ತು ಸಬಲೆಯರಾಗಿರುವುದಕ್ಕೆ ಅಂಬೇಡ್ಕರ್ ಅವರು ಅಂದು ನಡೆಸಿದ ಹೋರಾಟಗಳೇ ಕಾರಣ ಎಂದು ಮಹದೇವಪ್ಪ ತಿಳಿಸಿದರು.
ಸಮಸಮಾಜವನ್ನು ನಿರ್ಮಿಸಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಆದ್ದರಿಂದ ಹೆಣ್ಣುಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯುವ ಮೂಲಕ ದೇಶದ ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದು ಅವರು ಕರೆ ನೀಡಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕಹರೀಶ್ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾತನಾಡಿ ಮಹಾರಾಣಿ ಕಾಲೇಜಿನಂತಹ ಸಂಸ್ಥೆಯು ನಮಗೆ ದೊರೆಯಲು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯೇ ಮೂಲ ಕಾರಣ ಎಂದು ಸ್ಮರಿಸಿದರು.
.
ನಮ್ಮ ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣದ ಜೊತೆಗೆ, ಸುಮಾರು 2,900 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ. ಮಹಿಳೆಯರು ಸಬಲರಾಗಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಕಂಡ ಕನಸನ್ನು ಇಂದು ನಮ್ಮ ಸರ್ಕಾರವು ನನಸು ಮಾಡುತ್ತಿದೆ. ಇದರ ಜೊತೆಗೆ ಮೈಸೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ಜಯದೇವ್ ಆಸ್ಪತ್ರೆಯ ಪ್ರಾಧ್ಯಾಪಕರು ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್ ಸದಾನಂದ ಅವರು ಮಾತನಾಡಿ, ಎನ್.ಸಿ.ಸಿ ಮತ್ತು ರೇಂಜರ್ಸ್ ನಾಯಕತ್ವ, ಧೈರ್ಯ ಮತ್ತು ರಾಷ್ಟ್ರೀಯ ಹೆಮ್ಮೆಯ ಪ್ರಜ್ಞೆಯನ್ನು ಹುಟ್ಟುಹಾಕುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರೊ. ಪ್ರತಿಭಾ ಡಿ.ಎಸ್, ರಂಗಾಯಣದ ಮಾಜಿ ನಿರ್ದೇಶಕ ಎಚ್. ಜನಾರ್ಧನ್, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಶಿವಣ್ಣ, ಐಕ್ಯೂಎಸಿ ಸಂಚಾಲಕ ಡಾ. ಮುತ್ತುರಾಜ್ ಎಸ್ ಉಪಸ್ಥಿತರಿದ್ದರು.
