ಮೈಸೂರು: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಕರೆ ನೀಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಮೈಸೂರಿನಲ್ಲೂ ಪ್ರತಿಭಟನೆ ನಡೆದಿದ್ದು, ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆಗಳು ಸ್ಥಗಿತಗೊಳ್ಳಲಿವೆ.
ವಾರದಲ್ಲಿ ಐದು ದಿನಗಳ ಕೆಲಸದ ಘೋಷಣೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಯುಎಫ್ ಬಿಯು ಸರ್ಕಾರದ ಮುಂದೆ ಇಟ್ಟಿದ್ದು, ಈ ಸಂಬಂಧ ಸರಸ್ವತಿ ಪುರಂ, ಟಿ.ಕೆ.ಲೇಔಟ್ ನಲ್ಲಿರುವ ಎಸ್ ಬಿಐ ಆಡಳಿತ ಭವನದ ಎದುರು ಸಂಘಟಕ ಕಲ್ಯಾಣ್ ಅವರ ಮುಂದಾಳತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದರು.
ಸೆಪ್ಟೆಂಬರ್ 11ರಂದು ಸಾಂಕೇತಿಕ ಮುಷ್ಕರದ ನಂತರವೂ ಸರ್ಕಾರ ಹಾಗೂ ಭಾರತೀಯ ಬ್ಯಾಂಕುಗಳ ಒಕ್ಕೂಟ ಸ್ಪಂದಿಸದಿದ್ದರೆ, ಮುಂದಿನ ಹಂತದಲ್ಲಿ ಮೂರು ದಿನಗಳ ಕಾಲ ದೇಶದಾದ್ಯಂತ ಸಂಪೂರ್ಣ ಬ್ಯಾಂಕ್ ಬಂದ್ ನಡೆಸಲಾಗುವುದು ಎಂದು ಒಕ್ಕೂಟ ಎಚ್ಚರಿಕೆ ನೀಡಿದೆ.
ಈ ಮೂರು ದಿನಗಳ ಮುಷ್ಕರ ಸೆಪ್ಟೆಂಬರ್ 28ರಿಂದ ನಡೆಯಲಿದ್ದು, ಅದಕ್ಕೂ ಫಲ ಸಿಗದಿದ್ದರೆ ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಸಂಘಟನೆಗಳು ತಿಳಿಸಿವೆ.
