ಮೈಸೂರು: ಜಾತ್ಯತೀತ ಸಮಾಜ ನಿರ್ಮಾಣದ ತತ್ವದಲ್ಲಿ ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದ್ದರು ಎಂದು ಮಾಜಿ ಸಚಿವ ಸಾ ರಾ ಮಹೇಶ್ ಹೇಳಿದರು.
ಬಸವೇಶ್ವರ ಜಯಂತಿ ಅಂಗವಾಗಿ ನಗರದ ಗನ್ ಹೌಸ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಜಾತ್ಯತೀತ ಸಮಾಜ ನಿರ್ಮಾಣದ ತತ್ವದಲ್ಲಿ ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದ್ದರು. ಸಮಸಮಾಜದ ಅಭಿವೃದ್ಧಿಗಾಗಿ ಹೋರಾಡಿದ್ದರು. ಸಮಾಜದಲ್ಲಿ ಸರ್ವರಿಗೂ ಸ್ವತಂತ್ರ ಹಕ್ಕು, ಅವಕಾಶ,ನ್ಯಾಯ ಒದಗಿಸಬೇಕೆಂದು ಅನುಭವ ಮಂಟಪ ಪರಿಕಲ್ಪನೆ ಹಾಗೂ ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಬಸವಣ್ಣನವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಯುವಸಮೂಹ ಅರಿತು ಮುನ್ನಡೆಯಬೇಕು. ಅವರ ಜೀವನ ಸಂದೇಶ ಸಮಾಜಕ್ಕೆ ಆದರ್ಶಪ್ರಾಯ ಎಂದು ತಿಳಿಸಿದರು.
ಹನ್ನೆರಡನೇ ಶತಮಾನದಲ್ಲಿ ಜಾತಿವ್ಯವಸ್ಥೆ ಮತ್ತು ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಬಸವಣ್ಣನವರು ಸಮಾಜದಲ್ಲಿ ಬೆಳಗಿಸಿದ ಜ್ಯೋತಿಯ ಪ್ರಾಮುಖ್ಯತೆ ಇಂದಿಗೂ ಅವಶ್ಯಕ ಎಂದು ಸಾ ರಾ ಮಹೇಶ್ ಒತ್ತಿ ಹೇಳಿದರು.
ಈ ಸಂಧರ್ಭದಲ್ಲಿ ಮಾಜಿ ಉಪಾ ಮಹಾಪೌರ ಶೈಲೇಂದ್ರ, ಅಮಿತ್ ವಿಶ್ವನಾಥ್, ಬಸವ ಜಯಂತಿ ಪ್ರಚಾರ ಸಮಿತಿ ಅಧ್ಯಕ್ಷ ಜೀವಧಾರ ಗಿರೀಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ಕೆ.ವಿ.ಶ್ರೀಧರ್, ಜಗದೀಶ್, ಕೆ.ಆರ್ ಬ್ಯಾಂಕ್ ಅಧ್ಯಕ್ಷ ಬಸಪ್ಪ ಬಸವರಾಜ್, ಜೆಡಿಎಸ್ ಮುಖಂಡ ಅಮ್ಮ ಸಂತೋಷ್, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ದೂರ ರಾಜಣ್ಣ, ಲೋಹಿತ್, ಅಪೂರ್ವ ಸುರೇಶ್, ರಾಧಾಕೃಷ್ಣ ಮತ್ತಿತರರು ಹಾಜರಿದ್ದರು.
