ರಾಯಚೂರು: ಕಾಯಕವರ್ಗದ ಬಂಧುಗಳು ಕೇವಲ ಒಂದೇ ಕೆಲಸಕ್ಕೆ ಸೀಮಿತವಾಗದೆ, ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ವಿವಿಧ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರಾಗಬೇಕು ಎಂದು ಸಚಿವ ಡಾ. ಯತೀಂದ್ರ ಹೇಳಿದರು.
ನಗರದ ಜಿಲ್ಲಾ ಯಾದವ ಸಂಘ ಹಾಗೂ ಶ್ರೀ ಕೃಷ್ಣ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಥೋತ್ಸವಕ್ಕೆ ಚಾಲನೆ ನೀಡಿ ಸಚಿವರು ಮಾತನಾಡಿದರು.
ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಕರೆ ನೀಡಿದಂತೆ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಮತ್ತು ನೈಜ ಪ್ರಗತಿ ಸಾಧಿಸಲು ಸಾಧ್ಯ ಹಾಗಾಗಿ ಮಕ್ಕಳಿಗೆ ಶಿಕ್ಷಣ ನೀಡೋಣ ಜೊತೆಗೆ ನಾವೆಲ್ಲರೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾ ಅಭಿವೃದ್ಧಿಯತ್ತ ಸಾಗೋಣ ಎಂದು ಕರೆ ನೀಡಿದರು.
ಕಾರ್ಯಕ್ರಮ ಅರಳೆಬಂಡೆ ಮಠದ ಶ್ರೀ ಮರಿಸ್ವಾಮಿ ತಾತನವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಕರ್ನಾಟಕ ರಾಜ್ಯ ಯಾದವ ಸಂಘದ ಉಪಾಧ್ಯಕ್ಷರಾದ ಡಾ. ಎ. ಮಾರೆಪ್ಪ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ಡಿ.ಟಿ. ಶ್ರೀನಿವಾಸ್, ಎನ್.ಎಸ್. ಬೋಸರಾಜು, ರಾಯಚೂರು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ. ಶಾಂತಪ್ಪ, ರಾಯಚೂರು ಮಹಾನಗರ ಪಾಲಿಕೆ ಸದಸ್ಯೆ ಗಾಯತ್ರಿ ಹರೀಶ್ ನಾಡಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎನ್. ಶಂಕರಪ್ಪ, ಆರ್ ಡಿ ಎ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ರಾಯಚೂರು ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಕೆ. ಹನುಮಂತಪ್ಪ, ಸಂಕೀರ್ಣ ನಿರ್ವಹಣಾ ಸಮಿತಿ ಅಧ್ಯಕ್ಷ ದಾನಪ್ಪ ಯಾದವ, ಕೃಷ್ಣ ವಿದ್ಯಾರ್ಥಿ ನಿಲಯದ ಅಧ್ಯಕ್ಷ ರಮೇಶ್ ಯಾದವ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
