ಕೊಳ್ಳೇಗಾಲ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ಬಗ್ಗೆ ಸ್ವಯಂಘೋಷಿತ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ನೇತೃತ್ವದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಹೆಸರಿನಲ್ಲಿ ನೀಡುತ್ತಿರುವ ಸುಳ್ಳು ದೂರುಗಳನ್ನು ಮಾನ್ಯ ಮಾಡದಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಯಿತು.
ಸೋಮವಾರ ಕೊಳ್ಳೇಗಾಲ ತಾಲೂಕು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ತಾಲೂಕು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಬರೆಯಲಾಗಿರುವ ಲಿಖಿತ ಮನವಿ ಪತ್ರವನ್ನು ತಾಲೂಕು ಕಚೇರಿಯಲ್ಲಿ ಶಿರಸ್ತೇದಾರ್ ಕೃಪಾಕರ್ ಅವರಿಗೆ ಹಸ್ತಾಂತರಿಸಲಾಯಿತು.
ಇದೇ ವೇಳೆ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಮಾಳಿಗೆ ಮಾತನಾಡಿ, ಡಿವಿಜಿ ಅವರು ಸಂಸ್ಥಾಪಿಸಿದ ನಮ್ಮ ರಾಜ್ಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ತೊಂಬತ್ತೈದು ವಸಂತಗಳು ತುಂಬಿವೆ. ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲೂಕು ಘಟಕಗಳನ್ನು ಹೊಂದಿರುವ, ಹತ್ತು ಸಾವಿರ ಸಕ್ರಿಯ ಪತ್ರಕರ್ತ ಸದಸ್ಯರಿರುವ ಭಾರತ ದೇಶದ ಬೃಹತ್ ಸಂಘಟನೆಯಾಗಿದೆ ಎಂದು ಹೇಳಿದರು.
ಚುನಾವಣಾ ಪ್ರಕ್ರಿಯೆ ಮೂಲಕ ಅಯ್ಕೆಯಾಗಿರುವ ನಮ್ಮ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ಬಗ್ಗೆ ಇತ್ತೀಚೆಗೆ ಹುಟ್ಟಿಕೊಂಡ ಸ್ವಯಂಘೋಷಿತ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ನೇತೃತ್ವದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಹೆಸರಿನಲ್ಲಿ ಸರ್ಕಾರಕ್ಕೆ ಕೊಳ್ಳೇಗಾಲ ತಾಲೂಕು ಸೇರಿದಂತೆ ಇತರಡೆಗಳಿಂದ ಸಲ್ಲಿಕೆಯಾಗುತ್ತಿರುವ ಸುಳ್ಳು ದೂರು ಖಂಡನೀಯ ಎಂದು ತಿಳಿಸಿದರು.
ಬಂಗ್ಲೆ ಮಲ್ಲಿಕಾರ್ಜುನ ಅವರು ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಬಗ್ಗೆ ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ (ಕೇಸ್ ನಂಬರ್ :581/333/2019) ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಸಿರಗುಪ್ಪದಲ್ಲೂ ಪೊಲೀಸ್ ಪ್ರಕರಣ ದಾಖಲಾದ ಬಳಿಕ ಊರು ತೊರೆದಿದ್ದಾರೆ.
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಿ ಬಚಾವ್ ಆಗಿರುವುದು ಹಸಿಹಸಿಯಾಗಿದೆ. ಇಂಥಹ ಹಿನ್ನೆಲೆಯ ಬಂಗ್ಲೆ ಮಲ್ಲಿಕಾರ್ಜುನ ಅವರು ಪತ್ರಕರ್ತರ ಸಂಘಟನೆ ಸೋಗಿನಲ್ಲಿ, ನಮ್ಮ ರಾಜ್ಯ ಸಂಘದಿಂದ ಸದಸ್ಯತ್ವ ಕೊಡಲು ನಿರಾಕರಿಸಿದವರ ಕೂಟ ಕಟ್ಟಿಕೊಂಡು ಕುತಂತ್ರ ಮಾಡುತ್ತಲೇ ಇದ್ದಾರೆ.ಆದ್ದರಿಂದ ಇವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ರಂಗಭೂಮಿ ನೆಲೆಯಿಂದ ಬೆಳೆದುಬಂದಿರುವ ಶಿವಾನಂದ ತಗಡೂರು ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಬಂದಿರುವುದು ಇವರ ಹೊಟ್ಟೆಉರಿ ಹೆಚ್ಚಾಗಿ ಇಲ್ಲಸಲ್ಲದ ಆಪಾದನೆಗಳ ದೂರನ್ನು ನಮ್ಮ ರಾಜ್ಯಾಧ್ಯಕ್ಷರ ವಿರುದ್ಧ ಕೆಲ ದಿನಗಳಿಂದ ಮಾಡುತ್ತಿದ್ದಾರೆ.
ನೈಜ ಪತ್ರಕರ್ತರ ಸಂಘಟನೆಯಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾಯಿತರಾದ ರಾಜ್ಯಾಧ್ಯಕ್ಷರಾದ ಶಿವನಂದ ತಗಡೂರು ಅವರ ಮೇಲೆ ನೀಡಿರುವ ದೂರುಗಳನ್ನು ತಾವು ಹಾಗೂ ರಾಜ್ಯ ಸರ್ಕಾರ ಮಾನ್ಯ ಮಾಡಬಾರದು ಎಂದು ಮನವಿ ಮಾಡಿದರು.
ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ನಟರಾಜು, ಉಪಾಧ್ಯಕ್ಷರಾದ ಎಂ.ವಸಂತ್ ಕುಮಾರ್, ಎಂ.ಚಂದ್ರಶೇಖರ್, ಸಹ ಕಾರ್ಯದರ್ಶಿ ಆರ್.ಸಾಗರ್, ನಿರ್ದೇಶಕರಾದ ಎ.ಎಚ್.ಗೋವಿಂದ, ಎಸ್.ರಾಜು, ಬಸಂತ್ ಮೊಟಾಯ್, ಅವಿನ್ ಪ್ರಕಾಶ್, ಎಂ.ಪಿ.ಮಹೇಶ್, ಡಿ.ಸಿದ್ದರಾಜು, ಪಿ.ಲಿಂಗರಾಜು, ಜಿಲ್ಲಾ ನಿರ್ದೇಶಕರಾದ ಎಂ.ಮರಿಸ್ವಾಮಿ, ಎಸ್.ರಾಜಶೇಖರ್, ಸದಸ್ಯರಾದ ಎಂ.ಸುರೇಂದ್ರ ಕುಮಾರ್, ಎಸ್.ಶಿವಕುಮಾರ್, ಪಿ.ಮಹೇಶ್, ಎನ್.ನಾಗೇಂದ್ರಸ್ವಾಮಿ, ಜಿ.ಸಾಮುವೆಲ್, ಎಂ.ಪವನ್ ಕುಮಾರ್, ಜೆ.ಪಿ.ಸುನಿಲ್ ಪ್ರಶಾಂತ್, ಎಂ.ಕಾರ್ತಿಕ್, ಎಸ್.ಸನತ್ ಕುಮಾರ್ ಹಾಜರಿದ್ದರು.
