ಚಾಮರಾಜನಗರ: ನಗರದ ಹೊರವಲಯ ದಲ್ಲಿರುವ ಹೋಟೆಲ್,ರೆಸ್ಟೋರೆಂಟ್ ಹಾಗೂ ಆಹಾರ ಉತ್ಪಾದನಾ ಘಟಕಗಳಿಗೆ
ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಉಪವಿಭಾಗಾಧಿಕಾರಿ ಹಾಗೂ ಆಹಾರ ಸುರಕ್ಷತಾ ಅಧಿಕಾರಿ ದಿನೇಶ್ ಕುಮಾರ್ ಮೀನಾ ಅವರು ಇಂದು ದಿಢೀರ್ ಭೇಟಿ ನೀಡಿ ಶಾಕ್ ನೀಡಿದರು.
ಹೋಟೆಲ್ ಮಕಾವ್ ಹಾಗೂ ಉಡುಪಿ ಗ್ರಾಂಡ್ ರೆಸ್ಟೋರೆಂಟ್ ನಲ್ಲಿ ದಾಸ್ತಾನು ಮಾಡಲಾಗಿದ್ದ ದಿನಸಿ ಪದಾರ್ಥಗಳು, ತರಕಾರಿ, ಇನ್ನಿತರ ಸಾಮಾಗ್ರಿಗಳನ್ನು ವೀಕ್ಷಿಸಿದರು.
ಈ ವೇಳೆ ಆಹಾರದಲ್ಲಿ ಕೃತಕ ಬಣ್ಣ ಮಿಶ್ರ ಮಾಡಿರುವುದು, ಅಡುಗೆ ಮನೆಯಲ್ಲಿ ಸ್ವಚ್ಚತೆ ಇಲ್ಲದಿರುವುದು ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ, ಗುಣಮಟ್ಟವಿಲ್ಲದ ದಿನಸಿ ಸಾಮಗ್ರಿಗಳು ಕಂಡುಬಂದಿತು.
ಹೋಟೆಲ್ ಮಕಾವ್ ನಲ್ಲಿ ತಾಜಾ ಇಲ್ಲದ ಮಾಂಸ, ಮಶ್ರೂಮ್ ಅನ್ನು ರೆಫ್ರಿಜರೇಟರ್ ನಲ್ಲಿ ಇಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಹೋಟೆಲ್ ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಅಧಿಕಾರಿಗಳು ಆದೇಶಿಸಿದರು.
ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕೇನ್ಸ್ ಕಾರ್ಖಾನೆ ಹಾಗೂ ಕಲರ್ ಟೋನ್ ಉದ್ಯಮ ಸಂಸ್ಥೆಯಲ್ಲಿ ಕಾರ್ಮಿಕರು ಮತ್ತು ಸಿಬ್ಬಂದಿಗಾಗಿ ತಯಾರಿಸಲಾದ ಆಹಾರ ಮತ್ತು ಗುಣಮಟ್ಟವನ್ನು ವೀಕ್ಷಿಸಿದರು. ಇಲ್ಲೂ ಕೂಡಾ ಊಟ ಉಪಹಾರ ಇನ್ನಿತರ ತಿನಿಸುಗಳ ತಯಾರಿಕೆಗಾಗಿ ಸಂಗ್ರಹಿಸಲಾಗಿದ್ದ ದಿನಸಿ ಪದಾರ್ಥಗಳನ್ನು ಪರಿಶೀಲಿಸಿದರು. ಉತ್ತಮ ಗುಣಮಟ್ಟ ಕಾಪಾಡಿಕೊಳ್ಳಬೇಕು. ಸ್ವಚ್ಚತೆ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು ಸೂಚಿಸಿದರು.
ಬದನಗುಪ್ಪೆ ಮುಖ್ಯ ರಸ್ತೆಯಲ್ಲಿರುವ ರಾಜಸ್ಥಾನಿ ಹೋಟೆಲ್ಗೆ ಭೇಟಿ ನೀಡಿ ಅಡುಗೆ ಮನೆ ಆಹಾರ ಧಾನ್ಯಗಳ ಸಂಗ್ರಹಣೆ ಹಾಗೂ ಆಹಾರ ಸುರಕ್ಷತೆಗೆ ವಹಿಸಿರುವ ಕ್ರಮಗಳನ್ನು ಪರಿಶೀಲಿಸಿದರು.
ಹೋಟೆಲ್ನಲ್ಲಿ ಸ್ವಚ್ಚತೆ ಇರಬೇಕು. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸಿ ಶುದ್ದ ಆಹಾರ ತಯಾರಿಸಬೇಕು. ಬೇಕರಿಗಳಲ್ಲಿ ತಾಜಾ ಹಾಗೂ ಬಿಸಿಯಾಗಿ ತಯಾರಿಸಿದ ತಿನಿಸುಗಳನ್ನು ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಾಕೀತು ಮಾಡಿದರು.
ಜಿಲ್ಲಾ ವ್ಯಾಪ್ತಿಗೆ ಬರುವ ಚಾಮರಾಜನಗರ-ನಂಜನಗೂಡು ಹೆದ್ದಾರಿಯಲ್ಲಿರುವ ವಿವಿಧ ರೆಸ್ಟೋರೆಂಟ್ ಹೋಟೆಲ್ಗಳಿಗೂ ಸಹ ಭೇಟಿ ಕೊಟ್ಟು ವ್ಯಾಪಕವಾಗಿ ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದರು.
ಈ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.
