ಮೈಸೂರು: ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಮಹಿಳಾ ಘಟಕದ ನೂತನ ರಾಜ್ಯಧ್ಯಕ್ಷರಾಗಿ ಮೈಸೂರಿನ ಯಶಸ್ವಿ ಉದ್ಯಮಿ, ಸಾಮಾಜಿಕ ಕಾರ್ಯಕರ್ತರಾದ ರಂಜಿತಾ ಸುಬ್ರಮಣ್ಯ ಅವರನ್ನು ನೇಮಕ ಮಾಡಲಾಗಿದೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಟಿ ವೇಳೆ ಪಕ್ಷದ ರಾಜ್ಯ ಅದ್ಯಕ್ಷ ಡಾ.ಬಿ.ಶಿವಣ್ಣ ಅವರು ಪಕ್ಷದ ಬಾವುಟ ನೀಡಿ ನೇಮಕಾತಿ ಪತ್ರ ವಿತರಿಸಿದರು.
ಪಕ್ಷದ ಹಿರಿಯ ನಾಯಕತ್ವ ಮತ್ತು ಹೈಕಮಾಂಡ್ ಈ ಮಹತ್ವದ ಜವಾಬ್ದಾರಿಯನ್ನು ಅವರಿಗೆ ವಹಿಸಿದೆ.
ಈ ಕುರಿತು ಸಂತೋಷ ವ್ಯಕ್ತಪಡಿಸಿದ ನೂತನ ರಾಜ್ಯಧ್ಯಕ್ಷರಾದ ರಂಜಿತಾ ಸುಬ್ರಮಣ್ಯ ಅವರು, ನನ್ನ ಮೇಲೆ ಭರವಸೆಯಿಟ್ಟು ಈ ಅತ್ಯುನ್ನತ ಜವಾಬ್ದಾರಿಯನ್ನು ನೀಡಿದ ಪಕ್ಷದ ಎಲ್ಲಾ ಹಿರಿಯ ಮುಖಂಡರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ರಾಜ್ಯಾದ್ಯಂತ ನಮ್ಮ ಪಕ್ಷದ ಮಹಿಳಾ ಘಟಕವನ್ನು ತಳಮಟ್ಟದಿಂದ ಬಲಪಡಿಸುವುದು ಮತ್ತು ಮಹಿಳೆಯರ ಹಕ್ಕುಗಳು, ಉದ್ಯಮಶೀಲತೆ ಹಾಗೂ ಕಲ್ಯಾಣಕ್ಕಾಗಿ ಶ್ರಮಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ವಿಶ್ವಾಸದಿಂದ ನುಡಿದರು ರಂಜಿತಾ.
ಇಂದಿನ ದಿನಗಳಲ್ಲಿ ಮಹಿಳೆಯರು ಕೇವಲ ರಾಜಕೀಯವಾಗಿ ಮಾತ್ರವಲ್ಲದೆ, ಆರ್ಥಿಕವಾಗಿಯೂ ಸ್ವಾವಲಂಬಿಗಳಾಗಬೇಕಿದೆ.ರಾಜ್ಯಾದ್ಯಂತ ಸಂಚರಿಸಿ, ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಮಹಿಳಾ ಸಂಘಟನೆಯನ್ನು ಬಲಗೊಳಿಸಿ, ನಾಯಕತ್ವ ಗುಣವಿರುವ ಸಕ್ರಿಯ ಮಹಿಳೆಯರನ್ನು ಪಕ್ಷದ ಮುಖ್ಯವಾಹಿನಿಗೆ ತರಲು ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ,ಮಹಿಳಾ ಘಟಕದ ಮುಂದಿನ ಕಾರ್ಯಸೂಚಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.
ರಂಜಿತಾ ಸುಬ್ರಮಣ್ಯ ಅವರ ಈ ನೇಮಕಾತಿಗೆ ಪಕ್ಷದ ಪದಾಧಿಕಾರಿಗಳು, ಉದ್ಯಮ ಕ್ಷೇತ್ರದ ಗಣ್ಯರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದರು.
