ಮೈಸೂರು: ಮೌಂಟ್ ಕೊಸಿಯುಸ್ಕೊ ಶಿಖರಾರೋಹಣಕ್ಕೆ ಸಜ್ಜಾಗಿರುವ
ಮೈಸೂರಿನ ಪ್ರೀತ್ ಅಪ್ಪಯ್ಯ ಅವರಿಗೆ
ಕೆಎಂಪಿಕೆ ಟ್ರಸ್ಟ್ ಹಾಗೂ ಕಾವೇರಿ ಕೊಡವ ಒಕ್ಕೂಟದ ವತಿಯಿಂದ ಶುಭ ಕೋರಲಾಯಿತು.
14ನೇ ಕರ್ನಾಟಕ ರಾಜ್ಯ ಶೂಟಿಂಗ್ ಸ್ಪರ್ಧೆ ಹಾಗೂ ಚಾಂಪಿಯನ್ಷಿಪ್-2026ರಲ್ಲಿ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಎರಡು ಚಿನ್ನದ ಪದಕಗಳನ್ನು ಗೆದ್ದು ರಾಜ್ಯದ ಗಮನ ಸೆಳೆದಿರುವ ಮೈಸೂರಿನ ಪ್ರೀತ್ ಅಪ್ಪಯ್ಯ ಅವರು ಇದೀಗ ಆಸ್ಟ್ರೇಲಿಯಾದ ಅತಿ ಎತ್ತರದ ಪರ್ವತ ಮೌಂಟ್ ಕೊಸಿಯುಸ್ಕೊ ಶಿಖರಾರೋಹಣಕ್ಕೆ ಸಜ್ಜಾಗಿದ್ದಾರೆ.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಕೆಎಂಪಿಕೆ ಟ್ರಸ್ಟ್ ಹಾಗೂ ಕಾವೇರಿ ಕೊಡವ ಒಕ್ಕೂಟದ ವತಿಯಿಂದ ಪ್ರೀತ್ ಅಪ್ಪಯ್ಯ ಅವರಿಗೆ ಶುಭ ಹಾರೈಸಲಾಯಿತು.
ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಮೌಂಟ್ ಕೊಸಿಯುಸ್ಕೊ ಶಿಖರದ ತುದಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ಸುರಕ್ಷಿತವಾಗಿ ಮರಳಲಿ ಎಂದು ಮುಖಂಡರು ಶುಭ ಕೋರಿದರು.
ಕ್ರೀಡಾ ಕ್ಷೇತ್ರದಲ್ಲಿ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿರುವ ಬನ್ನಿಮಂಟಪದ ನಿವಾಸಿ ಪ್ರೀತ್ ಅಪ್ಪಯ್ಯ ಅವರು ಶೂಟಿಂಗ್ ಮತ್ತು ಪರ್ವತಾರೋಹಣ ಎರಡೂ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಂಸ್ಕೃತಿಕ ನಗರಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಹಿಂದೆ 2023ರಲ್ಲಿ ಆಫ್ರಿಕಾದ ಅತಿ ಎತ್ತರದ ಮೌಂಟ್ ಕಿಲಿಮಂಜಾರೋ ಹಾಗೂ 2024ರಲ್ಲಿ ರಷ್ಯಾದ ಮೌಂಟ್ ಎಲ್ಬ್ರಸ್ ಶಿಖರಗಳನ್ನು ಯಶಸ್ವಿಯಾಗಿ ಏರಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದ ಅವರು, ವಿಶ್ವದ ಏಳು ಖಂಡಗಳ ಅತಿ ಎತ್ತರದ ಪರ್ವತಗಳನ್ನು ಏರುವ ‘ಸೆವೆನ್ ಸಮಿಟ್ಸ್’ ಗುರಿಯತ್ತ ಸಾಗುತ್ತಿದ್ದಾರೆ.
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನ ಸ್ನೋವಿ ಮೌಂಟೇನ್ಸ್ ಪ್ರದೇಶದಲ್ಲಿರುವ ಕೊಸಿಯುಸ್ಕೊ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೌಂಟ್ ಕೊಸಿಯುಸ್ಕೊ ಪರ್ವತವು ಸಮುದ್ರ ಮಟ್ಟದಿಂದ 2,228 ಮೀಟರ್ (7,310 ಅಡಿ) ಎತ್ತರದಲ್ಲಿದೆ.
ಈ ಶಿಖರವನ್ನು ಏರಿ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಕ್ಕೆ ಹಾಗೂ ಮೈಸೂರಿಗೆ ಹೆಮ್ಮೆ ತರಲು ಪ್ರೀತ್ ಅಪ್ಪಯ್ಯ ಸಜ್ಜಾಗಿದ್ದಾರೆ.
ಪ್ರೀತ್ ಅಪ್ಪಯ್ಯ ಅವರಿಗೆ ಶುಭ ಕೋರಿದ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ನಗರಪಾಲಿಕೆ ಮಾಜಿ ಸದಸ್ಯ ಮಾವಿ ರಾಮ್ ಪ್ರಸಾದ್, ಜಗದೀಶ್, ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಎಸ್.ಎನ್. ರಾಜೇಶ್, ವಿದ್ವಾನ್ ಕೃಷ್ಣಮೂರ್ತಿ, ವಿಜಯಲಕ್ಷ್ಮಿ ಅಯ್ಯಂಗಾರ್, ಸುಕೃತ್, ಕಾವೇರಿ ಕೊಡವ ಒಕ್ಕೂಟದ ಅಧ್ಯಕ್ಷ ಅಜ್ಜಿಕಂಡ ಚಿಟ್ಟಿಯಪ್ಪ, ಉಪಾಧ್ಯಕ್ಷ ಅತ್ರಂಗಡ ಪ್ರವೀಣ, ಸಮಿತಿ ಸದಸ್ಯರಾದ ಕೋಟೆರ ಕುಶಾಲಪ್ಪ, ನೇರಪಂಡ ಸನ್ನು ಮಂದಪ್ಪ ಹಾಗೂ ಮೈಸೂರು ಕೊಡವ ಸಂಘದ ಉಪಾಧ್ಯಕ್ಷ ಮಾಚಿಮಂಡ ನಾಣಯ್ಯ ಉಪಸ್ಥಿತರಿದ್ದರು.
