ಚಾಮರಾಜನಗರ: ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ಜಿಲ್ಲಾಡಳಿತದಿಂದ ಇಂದು ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 33 ದೂರುಗಳು ದಾಖಲಾದವು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರ ನೇತೃತ್ವದಲ್ಲಿ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಜನತೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಯಳಂದೂರಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನಗಳು ಇಲ್ಲ, ಹಿರಿಯ ನಾಗರಿಕರು, ಮಹಿಳೆಯರು ಪರಿತಪಿಸುವಂತಾಗಿದೆ. ಶೀಘ್ರವೇ ಬಸ್ ನಿಲ್ದಾಣದಲ್ಲಿ ಕುರ್ಚಿಗಳ ವ್ಯವಸ್ಥೆ ಮಾಡುವಂತೆ ಬಿಳಿಗಿರಿರಂಗನಬೆಟ್ಟದ ನಿವಾಸಿಯೊಬ್ಬರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಸೂಕ್ತ ಸೌಲಭ್ಯ ಕಲ್ಪಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.
ನಗರದ ವಿನಾಯಕ ಲೇಔಟ್ ನಿಂದ ಮಹಿಳೆಯೊಬ್ಬರು ಕರೆ ಮಾಡಿ ನಗರಸಭೆ ವತಿಯಿಂದ ಬಡಾವಣೆಗೆ ಕಸ ಸಂಗ್ರಹಣೆಗೆ ಬರುತ್ತಿಲ್ಲ. ಚರಂಡಿಗಳಲ್ಲಿ ನೀರು ತುಂಬಿದೆ. ಕುಡಿಯುವ ನೀರಿನ ಸಮಸ್ಯೆಯು ಇದೆ ಎಂದು ಅಹವಾಲು ಹೇಳಿಕೊಂಡರು.ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ನಗರಸಭೆ ಆಯುಕ್ತರನ್ನು ನಿಮ್ಮ ಬಡಾವಣೆಗೆ ಕಳುಹಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ನಾಗವಳ್ಳಿ ನಿವಾಸಿಯೊಬ್ಬರು ಮನಬಂದಮತೆ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಓಡಾಟಕ್ಕೆ ತೊಂದರೆಯಾಗುತ್ತಿದೆ. ಶಾಲಾ ಕಾಲೇಜು ಸಮಯದಲ್ಲಿ ಪೋಷಕರು ಸಹ ಏಕಮುಖ ಸಂಚಾರದಲ್ಲಿ ವಿರುದ್ದವಾದ ದಿಕ್ಕಿನಿಂದ ವಾಹನಗಳನ್ನು ಚಲಾಯಿಸುತ್ತಾರೆ, ಈ ಬಗ್ಗೆ ಹೆಚ್ಚು ನಿಗಾವಹಿಸಬೇಕು ಎಂದು ಹೇಳಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಫೋನ್ ಇನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ. ನೀವು ಪ್ರಸ್ತಾಪಿಸಿರುವ ಎಲ್ಲ ವಿಷಯಗಳ ಬಗ್ಗೆ ಕ್ರಮವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಹೇಳಿದರು.
ಯರಿಯೂರು ಗ್ರಾಮದ ನಿವಾಸಿಯೊಬ್ಬರು ಕರೆ ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ವಿಭಜಕ, ಹಂಪ್ಸ್ ಗಳನ್ನು ಅಗತ್ಯವಿರುವೆಡೆ ಅಳವಡಿಸದೆ ಇರುವ ಕಾರಣ ಅಪಘಾತಗಳು ಸಂಭವಿಸುತ್ತಿವೆ. ವಾಹನ ಸಂಚಾರರಿಗೆ ಮಾರ್ಗದರ್ಶನ ಮಾಡುವ ಫಲಕಗಳು ಇಲ್ಲ ಎಂದು ಗಮನಸೆಳೆದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಯವರು ನಾನು ಸಹ ಗಮನಿಸಿದ್ದೇನೆ. ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸಿದ್ದೇನೆ. ಮುಂದಿನ ಒಂದು ತಿಂಗಳೊಳಗೆ ಈ ಎಲ್ಲಾ ಅಳವಡಿಕೆ ಕಾಮಗಾರಿ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಇರಸವಾಡಿ ಗ್ರಾಮದ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಶೌಚಾಲಯವಿಲ್ಲ, ಊರಿನ ಚರಂಡಿಯ ಡೆಕ್ ಕುಸಿದಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ, ಇರಸವಾಡಿ ಹಾಗೂ ಪಕ್ಕದ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಸ್ಥಳೀಯರೊಬ್ಬರು ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ಪಂಚಾಯಿತಿ ವತಿಯಿಂದ ದುರಸ್ತಿಗೆ ಅಗತ್ಯಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಅಕ್ರಮ ಮದ್ಯ ಮಾರಾಟ ತಡೆಗೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸುಚಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ಜಮೀನಿನ ಖಾತೆ, ಜಮೀನಿಗೆ ಓಡಾಡುವ ದಾರಿ ಒತ್ತುವರಿ, ಬಸ್ ತಂಗುದಾಣ, ಪೈಪ್ ಲೈನ್ ಸರಿಪಡಿಸುವಿಕೆ, ರಸ್ತೆ ದುರಸ್ತಿ, ಸಿಮ್ಸ್ ಆಸ್ಪತ್ರೆಗೆ ರಾತ್ರಿ ವೇಳೆಯು ಸಮರ್ಪಕ ಬಸ್ಸೇವೆ, ನಗರದ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನದಲ್ಲಿ ಸ್ವಚ್ಚತೆ, ಸಂತೇಮರಹಳ್ಳಿಯಲ್ಲಿ ಕಬಿನಿ ಚಾನಲ್ಗೆ ತಡೆಗೋಡೆ ನಿರ್ಮಾಣ, ಬಹಿಷ್ಕಾರ, ಗುಂಡ್ಲುಪೇಟೆ ಭಾಗದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ಇನ್ನಿತರ ಹಲವು ದೂರುಗಳು ಹಾಗೂ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಲು ಸಾರ್ವಜನಿಕರಿಂದ ಮನವಿ ಬಂದವು.
ಕಾರ್ಯಕ್ರಮದ ಬಳಿಕ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ನಾಗರಿಕರಿಂದ ಕೇಳಿಬರುವ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಈ ಹಿಂದಿನ ಫೋನ್ ಇನ್ ಕಾರ್ಯಕ್ರಮದಲ್ಲಿ ದಾಖಲಾದ ಬಹುತೇಕ ದೂರುಗಳಿಗೆ ಕ್ರಮವಹಿಸಲಾಗಿದೆ. ಇಂದು ಬಂದಿರುವ ಕರೆಗಳಿಗೆ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಸಮಸ್ಯೆ ಪರಿಹರಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಡಿವೈಎಸ್ಪಿ ಸ್ನೇಹ ರಾಜ್, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
