ಪಂಜಾಬ್: ಪಂಜಾಬ್ ನ ಮಾನ್ಸಾ ಜಿಲ್ಲೆಯಲ್ಲಿ ಡ್ರಗ್ಸ್ ವಿರುದ್ಧ ಹೋರಾಡುತ್ತಿದ್ದ ಹೆಸರಾಂತ ಸಾಮಾಜಿಕ ಕಾರ್ಯಕರ್ತ ಪರ್ವಿಂದರ್ ಸಿಂಗ್ ಝೋಟಾ ಅವರನ್ನು ಫೇಸ್ಬುಕ್ ಲೈವ್ನಲ್ಲಿದ್ದಾಗಲೇ ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಮಂಗಳವಾರ ಮುಂಜಾನೆ ಈ ಘೋರ ಘಟನೆ ನಡೆದಿದ್ದು, ಇಡೀ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಪರ್ವಿಂದರ್ ಸಿಂಗ್ ಝೋಟಾ ಅವರು ಮೆಡಿಕಲ್ ಸ್ಟೋರ್ಗಳು ಅಕ್ರಮವಾಗಿ ಮಾದಕ ಮಾತ್ರೆ ಹಾಗೂ ಡ್ರಗ್ಸ್ ಮಾರಾಟ ಮಾಡುವುದನ್ನು ಪತ್ತೆಹಚ್ಚಿ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುತ್ತಿದ್ದರು.
ಮಾನ್ಸಾದ ವೈದ್ಯಕೀಯ ಅಂಗಡಿಯೊಂದರ ಮಾಲೀಕ ಅಕ್ರಮವಾಗಿ ಡ್ರಗ್ಸ್ ಮಾರುತ್ತಿದ್ದಾನೆ ಎಂದು ಆರೋಪಿಸಿ, ವೃದ್ಧರೊಬ್ಬರನ್ನು ಜೊತೆಗೆ ಕರೆದುಕೊಂಡು ಪರ್ವಿಂದರ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ನೇರಪ್ರಸಾರ ಪ್ರಾರರಂಭ ಮಾಡಿದ್ದರಷ್ಟೆ.
ಸುಮಾರು 5 ನಿಮಿಷಗಳ ವಿಡಿಯೋದಲ್ಲಿ, ಪರ್ವಿಂದರ್ ಅವರು ಅಂಗಡಿ ಮಾಲೀಕನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ನಮಗೆ ಈತ ಡ್ರಗ್ಸ್ ಕೊಟ್ಟಿದ್ದಾನೆ, ನಮ್ಮ ಬಳಿ ರೆಕಾರ್ಡಿಂಗ್ ಇದೆ ಎಂದು ಪರ್ವಿಂದರ್ ಹೇಳುವುದು ಕೇಳಿಸುತ್ತದೆ. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಇಬ್ಬರ ಜಗಳ ತಾರಕಕ್ಕೆ ಹೋಗಿದೆ,ಆಗ ಅಂಗಡಿ ಮಾಲೀಕ ಪಿಸ್ತೂಲ್ ಕೈಗೆತ್ತಿಕೊಂಡಿದ್ದಾನೆ,ಆಗ ಪರ್ವಿಂದರ್ ನನ್ನನ್ನು ಕೊಲ್ಲುತ್ತೀಯಾ, ಕೊಲ್ಲು ಎಂದು ಸವಾಲು ಹಾಕಿದ್ದಾರೆ.
ತಕ್ಷಣ ಮಾಲೀಕ ಪರ್ವಿಂದರ್ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ. ಪರ್ವಿಂದರ್ ಅವರ ಹೊಟ್ಟೆ ಹಾಗೂ ತೊಡೆ ಭಾಗಕ್ಕೆ 3 ಬುಲೆಟ್ಗಳು ತಗುಲಿದ್ದು, ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಅವರ ಕೈಲಿದ್ದ ಮೊಬೈಲ್ ಕೆಳಗೆ ಬಿದ್ದ ತಕ್ಷಣ ಲೈವ್ ಸ್ಟ್ರೀಮಿಂಗ್ ಕಟ್ ಆಗಿದೆ. ಈ ದಾಳಿಯಲ್ಲಿ ಪರ್ವಿಂದರ್ ಅವರ ಜೊತೆಯಿದ್ದ ಇತರ ನಾಲ್ವರಿಗೂ ಗಾಯಗಳಾಗಿವೆ.
ವರದಿಗಳ ಪ್ರಕಾರ, ಪರ್ವಿಂದರ್ ಮತ್ತು ಅದೇ ಅಂಗಡಿ ಮಾಲೀಕನ ನಡುವೆ 2023 ರಿಂದಲೂ ಹಗೆತನವಿತ್ತು. 2023 ರ ಜುಲೈನಲ್ಲಿ ಇದೇ ಮಾಲೀಕ ಅಕ್ರಮವಾಗಿ ಡ್ರಗ್ಸ್ ಮಾರುತ್ತಿದ್ದಾನೆ ಎಂದು ಆರೋಪಿಸಿದ್ದ ಪರ್ವಿಂದರ್ ಮತ್ತು ಅವರ ಬೆಂಬಲಿಗರು, ಆತನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿ ಅವಮಾನಿಸಿದ್ದರು. ಈ ಸಂಬಂಧ ಪರ್ವಿಂದರ್ ಜೈಲಿಗೂ ಹೋಗಿ, ಸಾರ್ವಜನಿಕರ ಹಾಗೂ ರೈತ ಸಂಘಟನೆಗಳ ತೀವ್ರ ಪ್ರತಿಭಟನೆಯ ನಂತರ ಬಿಡುಗಡೆಯಾಗಿದ್ದರು.
ಪರ್ವಿಂದರ್ ಸಿಂಗ್ ಝೋಟಾ ಅವರು ಮಾಜಿ ಬಾಕ್ಸರ್ ಆಗಿದ್ದರು ಮತ್ತು ಸ್ವತಃ ಡ್ರಗ್ಸ್ ಚಟದಿಂದ ಮುಕ್ತರಾಗಿ ಹೊರಬಂದವರಾಗಿದ್ದರು. ಪಂಜಾಬ್ನ ಮಾಲ್ವಾ ಭಾಗದಲ್ಲಿ ಯುವಕರನ್ನು ಮಾದಕ ದ್ರವ್ಯದ ದಾಸರನ್ನಾಗಿಸುತ್ತಿರುವ ಫಾರ್ಮಸಿ ಮಾಫಿಯಾ ವಿರುದ್ಧ ಅವರು ‘ಆಂಟಿ ಡ್ರಗ್ ಟಾಸ್ಕ್ ಫೋರ್ಸ್’ ರಚಿಸಿಕೊಂಡು ನಿರಂತರವಾಗಿ ಹೋರಾಡುತ್ತಿದ್ದರು. ಫೇಸ್ಬುಕ್ನಲ್ಲಿ ಇವರಿಗೆ ಸಾವಿರಾರು ಫಾಲೋವರ್ಸ್ಗಳಿದ್ದಾರೆ.
