ಮೈಸೂರು: ನಾಡಹಬ್ಬ ದಸರಾ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ವತಿಯಿಂದ ಹಮ್ಮಿಕೊಂಡಿರುವ ಕ್ರೀಡಾಕೂಟವನ್ನು ಮೈಸೂರು ದಸರಾ ಉದ್ಘಾಟಕರಾದ ಕೊಪ್ಪಳ ಗವಿಮಠ ಸಂಸ್ಥಾನದ ಅಭಿನವಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಶ್ಲಾಘಿಸಿದರು.
ರಾಜ್ಯದ 4500 ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಸಿ.ಎಂ. ಕಪ್ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡು ನಾಡಿನ ಕೀರ್ತಿಯನ್ನು ದೇಶದಾದ್ಯಂತ ಪಸರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಗಳು ನಗರದ ಚಾಮುಂಡಿ ವಿಹಾರ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ,ಮೊದಲಿಗೆ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಕಲಬುರ್ಗಿ ವಿಭಾಗಗಳ ಮಧ್ಯ ನಡೆದಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಸಂತೋಷದಿಂದ ವೀಕ್ಷಿಸಿದರು.
ನಂತರ ಅಥ್ಲೆಟಿಕ್ ಸಿಂಥೆಟಿಕ್ ಅಂಕಣಕ್ಕೆ ಆಗಮಿಸಿ ಮಹಿಳೆಯರ ಹಾಗೂ ಪುರುಷರ 400X4 ರಿಲೇ ವೀಕ್ಷಿಸಿ ಬಹುಮಾನ ವಿತರಿಸಿದರು.
ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಕುಸ್ತಿ ಮನೆಗೆ ಆಗಮಿಸಿ ದೇಸಿ ಆಟ ಮಕ್ಕಳ ಕುಸ್ತಿಯನ್ನು ನೋಡಿ ಶ್ರೀಗಳು ಖುಷಿಪಟ್ಟರು.
ಈ ಸಂದರ್ಭದಲ್ಲಿ ಗದಗಿನ ಚಿಕ್ಕೆನಕೊಪ್ಪೆ ಮಠದ ಶಿವಶಾಂತವೀರ ಶ್ರೀಗಳು, ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ದಸರಾ ಕ್ರೀಡಾ ಉಪ ಸಮಿತಿ ಕಾರ್ಯಾಧ್ಯಕ್ಷರಾದ ಡಾ. ಜಿತೇಂದ್ರ ಶೆಟ್ಟಿ, ಜಂಟಿ ನಿರ್ದೇಶಕರಾದ ಸುಭಾಷ್ ಚಂದ್ರ, ಉಪ ನಿರ್ದೇಶಕರಾದ ಎಂ.ಸಿ. ರಮೇಶ್, ಸಹಾಯಕ ನಿರ್ದೇಶಕರುಗಳಾದ ಮಂಜುನಾಥಸ್ವಾಮಿ, ಡಾ. ಶರಣು ಗೋಗೇರಿ, ವಿಠ್ಠಲ್ ಜಾಬ್ಗೌಡರ್ ಇರೇಶ್ ನಾಯಕ್, ತರಬೇತುದಾರರಾದ ವಿಜಯಕೃಷ್ಣ, ವಿನೋದ್ ಕುಮಾರ್ ಸೇರಿದಂತೆ ಹಲವಾರು ಅಧಿಕಾರಿಗಳು ತರಬೇತುದಾರರು ಹಾಜರಿದ್ದರು.
